

ಮಂಗಳೂರು: ಮಹತೋಭಾರ ಶ್ರೀಮಂಗಳಾದೇವಿಯ ಶಯನೋತ್ಸವಕ್ಕೆ ಈ ಬಾರಿ ದಾಖಲೆಯ 1 ಲಕ್ಷ ಚೆಂಡು ಮಲ್ಲಿಗೆ ಭಕ್ತರಿಂದ ಸಪರ್ಮಣೆಯಾಗಿದೆ.
ಗುರುವಾರ ರಾತ್ರಿ ವರೆಗೂ ರಥ ಸವಾರಿ, ಉತ್ಸವಾದಿಗಳಿಂದ ಸಂತುಷ್ಟಳಾಗಿ ಮೆರೆದು, ದಣಿದು ಬಂದು ಗರ್ಭಗುಡಿ ಸೇರಿದ ದೇವಿ ಮಹಾಪೂಜೆ ಸ್ವೀಕರಿಸಿ, ಶ್ರೀ ಭೂತ ಬಲಿಯ ಬಳಿಕ ಶಯನೋತ್ಸವಕ್ಕೆ ಸಿದ್ಧಳಾದಳು. ದೇವಸ್ಥಾನದ ವಾರ್ಷಿಕ ಜಾತ್ರೆಯ ಅವಭೃತೋತ್ಸವ ಪೂರ್ವಭಾವಿಯಾಗಿ ಶ್ರೀ ದೇವಿಯ ಶಯನೋತ್ಸವ ನೆರವೇರುತ್ತದೆ. ಅದರಂತೆ ಗುರುವಾರ ಸಾಯಂಕಾಲ 4 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೂ ದೇವಳದ ಒಳ ಪ್ರಾಂಗಣಗಳಲ್ಲಿ ಭಕ್ತರಿಂದ ಸೇವಾರೂಪದಲ್ಲಿ ಮಲ್ಲಿಗೆ ಚೆಂಡಿನ ಅಟ್ಟಿಗಳನ್ನು ಸ್ವೀಕರಿಸಲಾಗಿತ್ತು. ಹೀಗಾಗಿ ಸಂಪೂರ್ಣ ದೇವಸ್ಥಾನದಲ್ಲಿ ಮಲ್ಲಿಗೆಯ ಪರಿಮಳವೇ ಮನ ತಣಿಸುವಂತಿತ್ತು. ದೇವಳದ ಗರ್ಭಗೃಹ, ಮುಖಮಂಟಪ, ರಂಗ ಮಂಟಪ, ದ್ವಾರಪಾಲಿಕೆಯರ ಮೂರ್ತಿ, ಸಿಂಹರಾಜನ ವಿಗ್ರಹಗಳಿಗೂ ಶಯನದ ಮಲ್ಲಿಗೆಯಿಂದ ಅಲಂಕರಿಸಲಾಗಿತ್ತು.
ಭಕ್ತರಿಂದ ಊರ ಮಲ್ಲಿಗೆಯ ಜತೆಗೆ, ಅಬ್ಬಲಿಗೆ, ಹಿಂಗಾರ, ಸಂಪಿಗೆ ಮೊದಲಾದ ಸುವಾಸನಾಯುಕ್ತ ಪುಷ್ಪಗಳು ಸಮರ್ಪಿಸಲ್ಪಟ್ಟಿತ್ತು. ರಾತ್ರಿ 1 ಗಂಟೆಯಿಂದ ಶಯನೋತ್ಸವ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು. ಶ್ರೀ ದೇವಿಯ ಮೂಲ ಬಿಂಬ, ಉತ್ಸವ ಮೂರ್ತಿ ಪುಷ್ಪ ಕನ್ನಡಿಯ ಸಹಿತ ಗರ್ಭಗೃಹದಲ್ಲಿ ಪಾಣಿ ಪೀಠದಿಂದ ಆರಂಭಗೊಂಡು ಸಂಪೂರ್ಣ ತಾಯಿಯ ಬಿಂಬವನ್ನು ಮಲ್ಲಿಗೆ ಹೂವುಗಳಿಂದ ಅಲಂಕರಿಸಲಾಯಿತು. ಮೂಲ ಬಿಂಬಕ್ಕೆ ಕಿರೀಟ, ಸ್ವರ್ಣ ದೃಷ್ಟಿ ನೇತ್ರ ತೊಡಿಸಿ, ಅವಲಕ್ಕಿ ಸರ, ವಜ್ರಕಂಠಿ ಹಾರ, ಸರ್ವಾಭರಣಾದಿಗಳಿಂದ ಅಲಂಕೃತಳಾಗಿ ಕೆಂಪು ವರ್ಣದ ಪುಷ್ಪಮಾಲೆ ಧರಿಸಿ ರಾರಾಜಿಸಿದಳು ಶ್ರೀ ಮಂಗಳಾದೇವಿ.
ಜತೆಗೆ ಧೂಪ ದೀಪಗಳ, ಪುಷ್ಪಾಲಂಕಾರ ಸುವಾಸನೆಯ ಸೊಬಗಿನೊಂದಿಗೆ ಹರಿವಾಣಗಳಲ್ಲಿ ಹಣ್ಣು, ನೈವೇದ್ಯ ಫಲಪುಷ್ಪ ಮೊಳಕೆಯೊಡೆದ ಅಂಕುರಗಳನ್ನು ದೇವಿಯ ಪದತಲದಲ್ಲಿಟ್ಟು ಶ್ವೇತ ವರ್ಣದ ವಸ್ತ್ರದಿಂದ ತಾಯಿಗೆ ಹೊದಿಸಿ ಬಿಡುವುದರ ಮೂಲಕ ಕವಾಟ ಬಂಧನ ನೆರವೇರಿಸಲಾಯಿತು.
ಶುಕ್ರವಾರ ಮುಂಜಾನೆ ಅರುಣೋದಯ (6.36ಕ್ಕೆ) ಪ್ರದೋಷ ಕಾಲಕ್ಕೆ, ಶಂಖ, ಜಾಗಟೆ, ಚೆಂಡೆ, ನಾಗಸ್ವರ, ಗೋಪುರ ಘಂಟಾನಾದ ಸಹಿತ ಸರ್ವವಾದ್ಯಘೋಷಗಳ ಮೊಳಗಿಸಿ ಶಯನ ಸೇವೆಯಲ್ಲಿ ತಲ್ಲೀನಳಾಗಿ ನಿದ್ರಾಸನಸ್ತಿತಳಾದ ಮಹಾತಾಯಿಯನ್ನು ಎಚ್ಚರ ಗೊಳಿಸಲಾಯಿತು. ದೇವಿಯ ಮುಖ ಮಂಟಪದ ಬಳಿಯಿರುವ ಗರ್ಭಗೃಹದ ಪ್ರವೇಶ ದ್ವಾರದ ಕವಾಟವ (ಬಾಗಿಲು) ತೆರೆಯುವದರೊಂದಿಗೆ ಗರ್ಭಗೃಹದ ಬಳಿಯಿರುವ ಎರಡೂ ತೂಗು ಘಂಟೆಗಳನ್ನು ಜೋರಾಗಿ ಹೊಡೆದು ದೇವಿಗೆ ಹೊದಿಸಲಾದ ಶ್ವೇತವರ್ಣದ ವಸ್ತ್ರವನ್ನು ಸರಿಸುತ್ತಿದ್ದಂತೆಯೇ, ತಾಯಿಯ ಬಿಂಬಕ್ಕೆ ಹಾಗು ಉತ್ಸವ ಮೂರ್ತಿಗೆ ನೇರ ದರ್ಪಣ (ಕನ್ನಡಿ)ವನ್ನು ಹಿಡಿಯುವ ಮೂಲಕ ಪ್ರತಿಬಿಂಬದಲ್ಲಿ ತನ್ನ ಶಯನಕಾಲದ ದರ್ಶನ ಪಡೆಯುವಂತೆ ಮಾಡಲಾಯಿತು. ಶ್ರೀ ದೇವಿಯ ಶಯನೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಸಿಕೊಂಡು ಧನ್ಯರಾದರು.