ಲಾರಿಗೆ ಡಿಕ್ಕಿ ಹೊಡೆದು ಒರ್ವ ಸಾವು, ಇಬ್ಬರಿಗೆ ಗಾಯ

Lorry Accident
Published on

ಬೆಂಗಳೂರು: ವೇಗವಾಗಿ ಬಂದ ಈಚರ್ ವಾಹನ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ.
ತುರಹಳ್ಳಿಯ ಭುವನೇಶ್ವರಿನಗರ ನಿವಾಸಿ ಶಿವ (೪೭) ಮೃತಪಟ್ಟ ಚಾಲಕ. ಉಪೇಂದ್ರನ್ ಮತ್ತು ಅಂಗಾದ್ ಎಂಬುವವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ೬.೩೦ರ ಸುಮಾರಿಗೆ ನಾಗೇಗೌಡನಪಾಳ್ಯ ಸೇತುವೆ ಬಳಿಯ ನೈಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
ಗಣೇಶನ್ ಎಂಬಾತ ಲೇಲ್ಯಾಂಡ್ ಲಾರಿಯಲ್ಲಿ ಬಳ್ಳಾರಿಯಿಂದ ಐರಾನ್ ಫ್ರೇಮ್ಸ್ ಲೋಡ್ ಮಾಡಿಕೊಂಡು ಕೊಯಮತ್ತೂರು ಕಡೆಗೆ ತೆರಳಿತ್ತಿದ್ದರು. ಮಾದನಾಯಕನಹಳ್ಳಿ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುವಾಗ ಮಾರ್ಗ ಮಧ್ಯೆ ನಾಗೇಗೌಡನಪಾಳ್ಯ ಸೇತುವೆ ಬಳಿಯ ನೈಸ್ ರಸ್ತೆಯಲ್ಲಿ ತೆರಳುವಾಗ ಹಿಂದಿನಿಂದ ವೇಗವಾಗಿ ಬಂದ ಈಚರ್ ವಾಹನ ಏಕಾಏಕಿ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಈಚರ್ ವಾಹನದ ಚಾಲಕ ಶಿವ ಹಾಗೂ ಪಕ್ಕದಲ್ಲಿ ಕುಳಿತ್ತಿದ್ದ ಉಪೇಂದ್ರನ್ ಹಾಗೂ ಅಂಗಾದ್ ಗಾಯಗೊಂಡಿದ್ದರು. ಕೂಡಲೇ ಇತರೆ ವಾಹನ ಸವಾರರು ಹಾಗೂ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶಿವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಉಳಿದಿಬ್ಬರು ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಚರ್ ವಾಹನದ ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ತಲಘಟ್ಟಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net