

ಎಚ್.ಡಿ.ಕೋಟೆ: ಕಾಡು ಹಂದಿ ದಾಳಿ ಮಾಡಿ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಪ್ರಕರಣ ತಾಲೂಕಿನ ಮೊತ್ತ ಕೆರೆ ಹಾಡಿಯಲ್ಲಿ ನಡೆದಿದೆ. ದಾಸಯ್ಯ ಕಾಡು ಹಂದಿ ದಾಳಿಗೆ ಒಳಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ ಹಾಡಿಯಿಂದ ತಾರಕ ನಾಲೆಯ ಮೇಲೆ ಜಮೀನಿಗೆ ತೆರಳುತ್ತಿದ್ದಾಗ ಪೊದೆಯಲ್ಲಿದ್ದ ಕಾಡು ಹಂದಿ ಏಕಾಏಕಿ ದಾಳಿ ನಡೆಸಿದೆ. ಹೊಟ್ಟೆ, ಬಲಗೈ ಹಾಗೂ ಕಾಲಿಗೆ ಗಂಭೀರ ಏಟು ಬಿದ್ದಿದೆ. ಜತೆಗಿದ್ದ ಇತರ ಹಾಡಿ ವಾಸಿಗಳು ಹಂದಿಯಿಂದ ರಕ್ಷಿಸಿ ದಾಸಯ್ಯನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.