ನಾಲ್ಕು ವರ್ಷದಲ್ಲಿ ನೂರು ಲಿವರ್ ಯಶಸ್ವಿ ಕಸಿ

5
Published on

ಮೈಸೂರು: ನಗರದ ಪ್ರತಿಷ್ಠಿತ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಯಶಸ್ವಿಯಾಗಿ ನೂರು ಯಕೃತ್ (ಲಿವರ್) ಕಸಿ ಮಾಡಲಾಗಿದೆ.

ಮೈಸೂರಿನಲ್ಲಿ ಮೊದಲ ಬಾರಿಗೆ 100 ಲಿವರ್ ಕಸಿ ಮಾಡಿದ ಹೆಗ್ಗಳಿಕೆ ಅಪೋಲೋ ಆಸ್ಪತ್ರೆಯದ್ದಾಗಿದೆ ಎಂದು ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭರತೀಶ ರೆಡ್ಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಆಸ್ಪತ್ರೆಯು ಅಂಗಾಂಗ ಕಸಿಯಲ್ಲಿ ಮುಂಚೂಣಿಯಲ್ಲಿದ್ದು, 2003ರಲ್ಲಿ ಮೂತ್ರಪಿಂಡ ಕಸಿಗೆ ಪರವಾನಗಿ ದೊರೆತಿದೆ. 2017ರಲ್ಲಿ ಲಿವರ್ ಕಸಿಗೆ ಪರವಾನಗಿ ಪಡೆದುಕೊಂಡಿತು. 2020ರಲ್ಲಿ ಬಹು-ಅಂಗ ಪ್ರತಿಜ್ಞಾವನೆಗೆ ಪರವಾನಗಿ ಪಡೆಯುವುದರ ಮೂಲಕ ದೇಶದ ಮೊದಲ ಪರವಾನಗಿ ಪಡೆದ ಅಂಗಾಂಗ ಕಸಿ ಕೇಂದ್ರ ಎನ್ನುವ ಮಾನ್ಯತೆ ಗಳಿಸಿದೆ ಎಂದರು.

ಈ ಸಾಧನೆ ಮತ್ತು ಯಶಸ್ವಿ ಶಸ್ತ್ರಚಿಕಿತ್ಸೆಗಳಿಗೆ ಅಪೋಲೊ ಆಸ್ಪತ್ರೆಯ ತಜ್ಞ ಶಸ್ತ್ರಚಿಕಿತ್ಸಕರು, ಕಸಿ ತಜ್ಞರು, ಅರವಳಿಕೆ ತಜ್ಞರು, ತೀವ್ರ ಚಿಕಿತ್ಸಾ ತಜ್ಞರು ಮತ್ತು ವೈದ್ಯರ ಪರಿಶ್ರಮ ಕಾರಣವಾಗಿದೆ. ನಮ್ಮ ಆಸ್ಪತ್ರೆಯು ಅತ್ಯಾಧುನಿಕ ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ ಶಸ್ತ್ರಚಿಕಿತ್ಸಾಲಯವನ್ನು ಹೊಂದಿದೆ. ಆಸ್ಪತ್ರೆಯು ಕಸಿ ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಮೀಸಲಾದ ಐಸಿಯು ಅನ್ನು ಒಳಗೊಂಡಿದೆ ಎಂದು ವಿವರಿಸಿದರು.

ದೇಶದಲ್ಲೇ ನಮ್ಮ ರಾಜ್ಯ ಅಂಗಾಂಗ ದಾನದಲ್ಲಿ 8ನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ, ದೆಹಲಿ ಹಾಗೂ ಗುಜರಾತ್ ಮೊದಲ ಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನಕ್ಕೆ ಜನರು ಮುಂದೆ ಬರುತ್ತಿರುವುದರಿಂದ ಅನೇಕ ಜನರ ಜೀವ ಉಳಿಸಿದಂತಾಗುತ್ತಿದೆ ಎಂದು ಹೇಳಿದರು.

ಮನುಷ್ಯ ಆರೋಗ್ಯದಿಂದ ಇರಲು ಲಿವರ್ ಪಾತ್ರವೂ ಅತಿಮುಖ್ಯವಾಗಿದ್ದು, ಇತ್ತೀಚೆಗೆ ಇದರ ತೊಂದರೆಗಳು ಹೆಚ್ಚಾಗುತ್ತಿದೆ. ಯಾವುದೇ ವಯಸ್ಸು, ಲಿಂಗ ತಾರತಮ್ಯ ಇಲ್ಲದೆ ತೊಂದರೆ ಕಾಣಿಸಿಕೊಳ್ಳುತ್ತಿದೆ ಎಂದರು.

ಇತ್ತೀಚಿನ ಜೀವನಶೈಲಿ, ಮದ್ಯಪಾನ, ಮಾನಸಿಕ ಒತ್ತಡ, ಜಂಕ್‌ಫುಡ್ ಸೇರಿದಂತೆ ನಾನಾ ಕಾರಣಗಳಿಂದ ಲಿವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಮ್ಮೊಮ್ಮೆ ದಿಢೀರ್ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ತಕ್ಷಣವೇ ಚಿಕಿತ್ಸೆ ನೀಡಬೇಕಿದೆ. ಸಣ್ಣ ಮಕ್ಕಳಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ಕಸಿ ಮಾಡಲು ಅವಕಾಶವಿದೆ ಎಂದು ಹೇಳಿದರು.

ಲಿವರ್ ಅನ್ನು ಜೀವಂತ ಹಾಗೂ ಬ್ರೈನ್ ಡೆಡ್ ಆದವರಿಂದ ಪಡೆಯಲು ಅವಕಾಶವಿದೆ. ಸ್ವಲ್ಪ ಪ್ರಮಾಣದ ಲಿವರ್ ಅನ್ನು ಜೀವಂತ ವ್ಯಕ್ತಿಯಿಂದ ಪಡೆದು, ಸಮಸ್ಯೆ ಇರುವವರಿಗೆ ಕಸಿ ಮಾಡಲಾಗುವುದು. ಲಿವರ್ ಬೆಳೆಯುವ ಸಾಮರ್ಥ್ಯ ಇರುವುದರಿಂದ ಹೊಂದಾಣಿಕೆ ಆಗುವವರು ಯಾರು ಬೇಕಾದರೂ ಲಿವರ್ ದಾನ ಮಾಡಬಹುದು ಎಂದು ತಿಳಿಸಿದರು.

ಅಪೋಲೋ ಬಿಜಿಎಸ್‌ನಲ್ಲಿ ಲಿವರ್ ಕಸಿಗೆ ಒಳಗಾದ ಮೂವರು ಶಸ್ತ್ರಚಿಕಿತ್ಸೆ ಮೊದಲು ಹಾಗೂ ಬಳಿಕ ಅಗಿರುವ ಬದಲಾವಣೆಯನ್ನು ಹಂಚಿಕೊಂಡರು.

ಆಸ್ಪತ್ರೆಯ ಗ್ಯಾಸೋಎಂಟರಾಲಜಿಸ್ಟ್ ಮತ್ತು ಗ್ಯಾಸ್ರೋಎಂಟರಾಲಜಿ ಸಂಸ್ಥೆಯ ಮುಖ್ಯಸ್ಥ ಡಾ. ರಾಜ್ ಕುಮಾರ್ ಪಿ.ವಧ್ಯಾ, ಸಮಗ್ರ ಲಿವರ್ ಆರೈಕೆ ಸೀನಿಯರ್ ಕನ್ನಲೆಂಟ್ ಎಚ್ಚಿಬಿ ಸರ್ಜರಿ ಮತ್ತು ಬಹು-ಅಂಗ ಕಸಿ ಶಸ್ತ್ರ ಚಿಕಿತ್ಸಕ ಡಾ.ಜಯಂತ್ ರೆಡ್ಡಿ, ಗ್ಯಾಸ್ಕೋ, ಹೆಪಟೋಬಿಲಿಯರಿ ಮತ್ತು ವ್ಯಾಂಕ್ರಿಯಾಟಿಕ್, ಲಿವರ್ ಟ್ರಾನ್ಸಾಂಟೇಶನ್ ಹಿರಿಯ ಸಲಹೆಗಾರ ಡಾ. ಸಂಜಯ್ ಗೋವಿಲ್, ಹೆವಟಾಲಜಿ ಮತ್ತು ಲಿವರ್ ಟ್ರಾನ್ಸಾಂಟ್ ಹಿರಿಯ ಸಲಹೆಗಾರ ಡಾ.ಸಂದೀಪ್ ಸತ್ತಂಗಿ, ಪೀಡಿಯಾಟ್ರಿಕ್ ಗ್ಯಾಸ್ರೋಎಂಟರೋಲಾಜಿಸ್ಟ್ ಡಾ. ಆಥಿರಾ ರವೀಂದ್ರನಾಥ್, ಲಿವರ್‌ಟ್ರಾನ್ಸಾಂಟೇಶನ್ ಶಸ್ತ್ರಚಿಕಿತ್ಸಕ ಡಾ.ಸಾಗರ್ ನಾರಾಯಣ್ ಅವರು ಶಸ್ತ್ರಚಿಕಿತ್ಸೆ, ಲಿವರ್ ಸಮಸ್ಯೆಗೆ ಕಾರಣ, ತಂತ್ರಜ್ಞಾನವನ್ನು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net