

ಮಂಡ್ಯ: ಬಾಲಮಂದಿರದಲ್ಲಿದ್ದ ಓರ್ವ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಕಲ್ಲಹಳ್ಳಿ ಬಡಾವಣೆಯ ಬಾಲಕಿಯರ ಬಾಲ ಮಂದಿರದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಪ್ರೀತಿಸುತ್ತಿದ್ದ ಬಾಲಕನನ್ನು ಪೋಷಕರು ಕಳೆದ ತಿಂಗಳು ಹತ್ಯೆಗೈದಿದ್ದರು. ಕೊಲೆ ಆರೋಪ ಹಿನ್ನೆಲೆಯಲ್ಲಿ ಬಾಲಕಿಯ ಪೋಷಕರು ಜೈಲುವಾಸದಲ್ಲಿರುವ ಕಾರಣ, ಬಾಲಕಿಯನ್ನು ಬಾಲಮಂದಿರಕ್ಕೆ ಸೇರಿಸಲಾಗಿತ್ತು.
ಬಾಲಕಿ ಕಳೆದ 4 ತಿಂಗಳಿನಿಂದ ಪೋಷಕರನ್ನ ನೋಡದೆ ಖಿನ್ನತೆಗೆ ಒಳಗಾಗಿದ್ದಳು. ಇಂದು ಬಾಲಮಂದಿರಲ್ಲಿ ಡೆತ್‌ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ:
ಕಳೆದ ಏಪ್ರಿಲ್ 15 ರಂದು ಅಪ್ರಾಪ್ತ ಬಾಲಕಿಯ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಬಾಲಕನೊಬ್ಬ ಕೊಲೆಯಾಗಿರುವ ಘಟನೆ ನಗರದ ಕಲ್ಲಹಳ್ಳಿ ಬಡಾವಣೆಯ ವಿಶ್ವೇಶ್ವರಯ್ಯ ನಗರದಲ್ಲಿ ನಡೆದಿತ್ತು.
ಬಡಾವಣೆಯ ನಿವಾಸಿ ಸತೀಶ್ ಅವರ ಪುತ್ರ ದರ್ಶನ್ (17) ಪ್ರೇಮ ಪ್ರಕರಣಕ್ಕೆ ಬಲಿಯಾದ ಬಾಲಕ. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಲಿಂಗು ಹಾಗೂ ಇತರರು ಬಾಲಕನನ್ನು ಮಧ್ಯರಾತ್ರಿ ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.
ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಸೋದರ ಮಾವ ನೀಡಿದ ದೂರನ್ನು ಆಧರಿಸಿ 17 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, 5 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.