ಕ್ರೇನ್​ನಿಂದ ಬಿದ್ದು ಓರ್ವ ಸಾವು, ಮಹಿಳೆ ಗಂಭೀರ...

Crime Lead
Published on

ಮನೆಯ ಸ್ಲ್ಯಾಬ್​ ಸೋರಿಕೆ ಸ್ಥಳ ಪರಿಶೀಲನೆ

ಅಳವಡಿಸಿದ್ದ ಬೆಲ್ಟ್​ ತುಂಡಾಗಿ ದುರ್ಘಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕ್ರೇನ್​ ತೊಟ್ಟಿಲಿನಲ್ಲಿ ನಿಂತು ಮನೆಯ ಸ್ಲ್ಯಾಬ್​ ಸೋರಿಕೆ ಸ್ಥಳ ಪರಿಶೀಲಿಸುತ್ತಿದ್ದ ಮಹಿಳೆ ಸೇರಿ ಈರ್ವರು ನೆಲಕ್ಕುರುಳಿ ಬಿದ್ದಿದ್ದು, ಓರ್ವ ಮೃತಪಟ್ಟ ಘಟನೆ ಉಡುಪಿ ಕೋರ್ಟ್​ ಹಿಂಭಾಗದ ರಸ್ತೆಯ ಲೋಕೋಪಯೋಗಿ ಇಲಾಖೆ ಕಚೇರಿ ಸನಿಹದ ಮನೆಯೊಂದರಲ್ಲಿ ಜೂನ್ 14ರಂದು ನಡೆದಿದೆ.

ಗಾಯಾಳು ಫ್ರಾನ್ಸಿಸ್​ ಪುಟಾಡೋರ್ (65) ಮೃತಪಟ್ಟಿದ್ದು, ಗಾಯಾಳು ಶಾರದಾ (35) ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ರೇನ್​ನ ತೊಟ್ಟಿಲಿಗೆ ಅಳವಡಿಸಿದ್ದ ಬೆಲ್ಟ್​ ತುಂಡಾಗಿದ್ದರಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಘಟನೆ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಸಮಾಜ ಸೇವಕ ನಿತ್ಯಾನಂದ ಒಳಕಾಡು, ತೀವ್ರ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಮಳೆಯ ನಡುವೆಯೇ ಅಂಗಳದಲ್ಲಿ ಬಿದ್ದಿದ್ದ ಮಹಿಳೆ ಹಾಗೂ ವ್ಯಕ್ತಿಯನ್ನು ಸ್ಥಳೀಯರ ಸಹಕಾರದಿಂದ ಅಜ್ಜರಕಾಡು ಸರ್ಕಾರಿ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಪರೀಕ್ಷಿಸಿದ ವೈದ್ಯರು, ಫ್ರಾನ್ಸಿಸ್​ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಮೃತರು ಮನೆಯ ಮಾಲೀಕ, ಮಸ್ಕತ್​ನಲ್ಲಿ ನೆಲೆಸಿರುವ ವಿನ್ಸೆಂಟ್​ ಪುಟಾಡೋರ್ ಅವರ ಸಹೋದರ ಎಂದು ತಿಳಿದುಬಂದಿದೆ.

ಕ್ರೇನ್​ನಲ್ಲಿ ತೆರಳಿದ್ದ ಮನೆ ಕೆಲಸದಾಕೆ, ಮಲ್ಪೆಯ ಕಲ್ಮಾಡಿ ಗ್ರಾಮದ ಶಾರದಾ ತೀವ್ರ ಗಾಯಗೊಂಡಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಯದಿಂದ ಚಾಲಕ ಪರಾರಿ

ನೆಲಕ್ಕೆ ಬಿದ್ದು ಈರ್ವರು ನರಳಾಡುತ್ತಿರುವುದನ್ನು ಕಂಡರೂ ಸಹ ಕ್ರೇನ್​ನ ಚಾಲಕ ಗಾಯಾಳುಗಳ ರಕ್ಷಣೆಗೆ ಮುಂದಾಗದೆ ಭಯಕ್ಕೊಳಗಾಗಿ ಕ್ರೇನ್​ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನ ನಿಷ್ಕಾಳಜಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net