

ಹೊಸಪೇಟೆ: ಗಣೇಶ ವಿಸರ್ಜನೆ ವೇಳೆ ಕ್ರೇನ್ ಪಲ್ಟಿಯಾಗಿದ್ದರಿಂದ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಗರದ ಹೊರವಲಯದ ಟಿಬಿ ಡ್ಯಾಂ ಕಾಲುವೆ ಬಳಿ ತಡ ರಾತ್ರಿ ಸಂಭವಿಸಿದೆ.
ಮೃತನನ್ನು ಟಿಬಿ ಡ್ಯಾಂನ ಪವರ್ ಕೆನಾಲ್ ಸಮೀಪದ ನಿವಾಸಿ ಅಶೋಕ್(೧೮) ಮೃತಪಟ್ಟಿದ್ದು, ಸಾಯಿ ನಿಖಿಲ್(೧೮) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುನ್ನು ಚಿಕಿತ್ಸೆಗಾಗಿ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಅಶೋಕ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ವಿವರ:
ಇಲ್ಲಿನ ಡ್ಯಾಂ ಸಮೀಪದ ಇವಿ ಕ್ಯಾಂಪ್‌ನ ಗಣೇಶ ಕಟ್ಟಿಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ವಿನಾಯಕ ಚತುರ್ಥಿಯಂದು ೩೪ ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ೧೧ನೇ ದಿನದ ಅಂಗವಾಗಿ ಶನಿವಾರ ಸಂಜೆ ಗಣೇಶ ವಿಸರ್ಜನೆ ಅದ್ದೂರಿ ಮೆರವಣಿಗೆ ಆರಂಭಗೊಂಡಿದ್ದು, ಗಂಟೆಗಳ ಕಾಲ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ರಾತ್ರಿ ೧ ಗಂಟೆ ಸುಮಾರಿಗೆ ಪವರ್ ಕೆನಾಲ್‌ಗೆ ತಲುಪಿದೆ. ಕ್ರೇನ್ ನೆರವಿನೊಂದಿಗೆ ಗಣೇಶ ವಿಸರ್ಜನೆ ಮಾಡುತ್ತಿದ್ದಾಗ ಕ್ರೇನ್ ಆಯ ತಪ್ಪಿ ಮುಗುಚಿ ಬಿದ್ದಿರುವುದು ಭಾರೀ ದುರಂತಕ್ಕೆ ಕಾರಣವಾಗಿದೆ.
ಕ್ರೇನ್ ಸಮೀಪದಲ್ಲೇ ನಿಂತಿದ್ದ ಅಶೋಕ್ ತಲೆಗೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವನೂ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ, ಪಿಐಗಳಾದ ಹುಲಗಪ್ಪ, ಶ್ರೀನಿವಾಸ್ ಮೇಟಿ ನೇತೃತ್ವದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಕ್ರೇನ್ ಮೇಲೆತ್ತಲು ಹರಸಾಹಸ ನಡೆಸಿದರು. ಬಳಿಕ ಮತ್ತೆರಡು ಕ್ರೇನ್‌ಗಳನ್ನು ಕರೆಯಿಸಿ, ರಕ್ಷಣಾ ಕಾರ್ಯ ನಡೆಸಿದರು.
ಮಹಾಗಣಪತಿ ಮಂಡಳಿ ವಿರುದ್ಧ ಎಫ್‌ಐಆರ್:
ಘಟನೆಗೆ ಅಗತ್ಯ ಮುಂಜಾಗ್ರತೆ ಕೈಗೊಳ್ಳದಿರುವುದು ಪ್ರಮುಖ ಕಾರಣವೆಂದು ಪರಿಗಣಿಸಿರುವ ಟಿಡಿ ಡ್ಯಾಂ ಠಾಣೆ ಪೊಲೀಸರು, ಇವಿ ಕ್ಯಾಂಪ್‌ನ ಶ್ರೀ ಮಹಾಗಣಪತಿ ಮಂಡಳಿ ಪದಾಧಿಕಾರಿಗಳು ಹಾಗೂ ಕ್ರೇನ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.