ಎಫ್‌ಪಿಒ ಬ್ರ್ಯಾಡಿಂಗ್‌ಗೆ ಅಗತ್ಯ ಸಹಕಾರ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

One day workshop on establishment of Raitha Bazaar Mandya
Published on

ಮಂಡ್ಯ: ರೈತರು ಬೆಳೆದ ಬೆಳೆಗಳನ್ನು ಸಂಸ್ಕರಣೆ, ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಕಲ್ಪಿಸಿ ಆರ್ಥಿಕವಾಗಿ ಸದೃಢಗೊಳಿಸಲು ರೈತರ ಉತ್ಪಾದಕರ ಸಂಸ್ಥೆ(ಎಫ್‌ಪಿಒ) ಗಳ ಸಂಖ್ಯೆ ಹೆಚ್ಚಿಸಿ ಬ್ರ್ಯಾಡಿಂಗ್ ಮಾಡಬೇಕಿದೆ. ಇದಕ್ಕೆ ಬೇಕಿರುವ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಪಕ್ಕದ ಕೃಷಿ ಇಲಾಖೆ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿ ತರಬೇತಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದಲ್ಲಿ ರೈತ ಬಜಾರ್ ಸ್ಥಾಪನೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.60 ರಿಂದ 70ರಷ್ಟು ಜನ ಕೃಷಿ ಪದ್ಧತಿಯ ಮೇಲೆ ಅವಲಂಬಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ಸರ್ಕಾರ ನಿರಂತರವಾಗಿ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದರು.

ರೈತರು ಆರ್ಥಿಕವಾಗಿ ಸದೃಢರಾದರೆ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂಬ ದೃಷ್ಟಿಯಿಂದ ಕೃಷಿ ಇಲಾಖೆಗೆ ಹೆಚ್ಚಿನ ಯೋಜನೆಗಳನ್ನು ನೀಡಲಾಗುತ್ತಿದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು. ಪಂಚ ಗ್ಯಾರಂಟಿ ಯೋಜನೆ, ಹಾಲಿಗೆ ಸಹಾಯಧನ ಸೇರಿದಂತೆ ವಿವಿಧ ರೀತಿಯ ಸಬ್ಸಿಡಿಗಳನ್ನು ನೀಡಿ ರಾಮ ರಾಜ್ಯ ಮಾಡುವ ಪ್ರಯತ್ನದಲ್ಲಿ ಸಿಎಂ ಮತ್ತು ಡಿಸಿಎಂ ಶ್ರಮಿಸುತ್ತಿದ್ದಾರೆ ಎಂದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಯೂರಿಯಾದ ಕೊರತೆ ಕಡಿಮೆಯಿದೆ. ಏಪ್ರಿಲ್ನಿಂದ ಆಗಸ್ಟ್‌ನಲ್ಲಿ ಬಿತ್ತನೆಯ ಸಂದರ್ಭದಲ್ಲಿ ಬೇಕಿರುವ ಅಗತ್ಯ ಯುರಿಯಾವನ್ನು ತೊಂದರೆಯಾಗದಂತೆ ರೈತರಿಗೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಆದರೆ ಯೂರಿಯಾದ ಹೆಚ್ಚಿನ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಂಡು ಇಳುವರಿ ಕಡಿಮೆಯಾಗುತ್ತದೆ. ಇದರ ಪರ್ಯಾಯವಾಗಿ ಉಪಯೋಗಿಸಬೇಕಿರುವ ಸಾವಯವ, ಹಸಿರೆಲೆ ಗೊಬ್ಬರದ ಬಗ್ಗೆ ಕೃಷಿ ವಿಜ್ಞಾನಿಗಳು ಮಾಹಿತಿ ನೀಡುತ್ತಿದ್ದಾರೆ. ಬದಲಾವಣೆ ಜಗದ ನಿಯಮ. ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.

ಕೃಷಿಯಲ್ಲಿ ನೀರನ್ನು ಮಿತಿಯಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಹೆಚ್ಚಿನ ಇಳುವರಿ ಪಡೆಯಬಹುದು.ರೈತರು ಬೇಕಿದ್ದರೆ ಇದನ್ನು ಪ್ರಾಯೋಗಿಕವಾಗಿ ಒಂದು ಎಕರೆಯಲ್ಲಿ ಮಿತಿಯಾಗಿ ನೀರು ಉಪಯೋಗಿಸಿ ಹಾಗೂ ಇನ್ನೊಂದು ಎಕರೆಯಲ್ಲಿ ಹೆಚ್ಚಾಗಿ ನೀರು ಬಳಸಿ ಎರಡು ಸ್ಥಳಗಳಲ್ಲಿ ಇಳುವರಿಯನ್ನು ತಾಳೆ ಮಾಡಿಕೊಳ್ಳಿ ಎಂದು ಹೇಳಿದರು.

ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಆಹಾರ ನಿಗಮದ ಅಧ್ಯಕ್ಷ ಡಾ.ಕೃಷ್ಣ, ಮೈಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಂಟಿ ಕೃಷಿ ನಿರ್ದೇಶಕ ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net