ರೈತರಿಗೆ ನೆರವಾಗಲು ಉತ್ಪಾದಕ ಸಂಘ ವೃದ್ಧಿಸಲಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

One day workshop Mandya
Published on

ಮಂಡ್ಯ: ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆ ಕಟ್ಟಿ ಮಾರಾಟ ಮಾಡುವ ರೀತಿ ಬದಲಾವಣೆ ಮಾಡಿಕೊಳ್ಳಲು ರೈತ ಉತ್ಪಾದಕ ಸಂಘಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು, ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಂಪನ್ಮೂಲ ಸಂಸ್ಥೆಗಳ ಮುಖ್ಯಸ್ಥರಿಗೆ ಆಯೋಜಿಸಿದ್ದ ವ್ಯಾಪಾರ ಮತ್ತು ವ್ಯವಹಾರ ಅಭಿವೃದ್ಧಿ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ಕೃಷಿಯಲ್ಲಿ ತನ್ನದೇ ಆದ ವಿಶೇಷ ಮಹತ್ವ ಹೊಂದಿದೆ. ರೈತರು ಆರ್ಥಿಕವಾಗಿ ಸದೃಢರಾಗಲು ರೈತರು ಬೆಳೆದ ಬೆಳೆಗಳ ಮೌಲ್ಯವರ್ಧನೆಯಾಗಬೇಕು. ರೈತ ಉತ್ಪಾದಕ ಸಂಘದ ಸಕ್ರಿಯವಾಗಿ ಕಾರ್ಯನಿರ್ವಹಿಸಿ ರೈತರಿಗೆ ಅಗತ್ಯ ಮಾಹಿತಿ ಒದಗಿಸಬೇಕು ಎಂದರು.

ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕೆಂದರೆ ದಲ್ಲಾಳಿ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಬೇಕು. ರೈತರು ನಿಜವಾಗಿಯೂ ಸ್ವಾವಲಂಬಿಗಳಾಗಬೇಕೆಂದರೆ, ರೈತ ಉತ್ಪಾದಕರ ಸಂಸ್ಥೆಗಳ ಅವಶ್ಯಕತೆ ಇದೆ. ಇದರಿಂದ ರೈತರು ಸಹ ಕಂಪನಿಗಳು ಮಾಲೀಕರಾಗಬಹುದು. ಸರ್ಕಾರದ ಪಿಎಂಎ್ಇ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ರೈತರು ಬೆಳೆದ ಬೆಳೆಗಳು ಗುಣಮಟ್ಟದಿಂದ ಕೂಡಿರಬೇಕು. ಗ್ರಾಹಕರ ಗಮನ ಸೆಳೆಯುವ ರೀತಿ ಬ್ರ್ಯಾಂಡಿಂಗ್ ಆಗಬೇಕು. ಇದರಿಂದ ಜಿಲ್ಲೆ ಮಾತ್ರವಲ್ಲ ಹೊರ ರಾಜ್ಯ ಮತ್ತು ರಾಷ್ಟ್ರದಲ್ಲಿ ಮಾರುಕಟ್ಟೆ ದೊರೆಯುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ದೇಶದ ಜಿಡಿಪಿಗೆ ಸೇವಾ ವಲಯದ ಕೊಡುಗೆ ಅತಿ ಹೆಚ್ಚು. ಅದರಲ್ಲಿ ಅತಿ ಹೆಚ್ಚು ಜನ ಕೃಷಿಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಶ್ರಮಪಟ್ಟು ದುಡಿಯುತ್ತಿರುವ ರೈತರಿಗಿಂತ ಹೆಚ್ಚು ಕೃಷಿಗೆ ಸಂಬಂಧಿಸಿದ ಕಂಪನಿ ಆದಾಯ ಗಳಿಸುತ್ತಿವೆ. ರೈತರ ಆದಾಯ ಹೆಚ್ಚಬೇಕು ಎಂದರೆ ಇಂತಹ ಕಾರ್ಯಾಗಾರಗಳು ಮುಖ್ಯ ಮುಕ್ತ ಮನಸ್ಸಿನಿಂದ ವಿಚಾರಗಳು ವಿನಿಮಯ ಮಾಡಿಕೊಂಡು ಅದನ್ನು ಕಾರ್ಯ ಪ್ರವೃತ್ತಿಯಲ್ಲಿ ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಸಹಾಯಕ ಕೃಷಿ ನಿರ್ದೇಶಕಿ ಸುನೀತಾ, ರೈತ ಉತ್ಪಾದಕ ಸಂಸ್ಥೆ ಮುಖ್ಯಸ್ಥರಾದ ಮಹೇಶ್‌ಚಂದ್ರ ಗುರು, ಕಾರಸವಾಡಿ ಮಹದೇವ್, ಹರೀಶ್, ಹನುಮಂತೇಗೌಡ, ಸುಬ್ರಹ್ಮಣ್ಯ, ಮಾಯಣ್ಣ, ಚಿಕ್ಕೇಗೌಡ, ಜಗದೀಶ್ ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net