ಅಂಜಿಕೊಳ್ಳದೇ ಕಾನೂನಿನ ರಕ್ಷಣೆ ಪಡೆದುಕೊಳ್ಳಿ: ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ ಕಿವಿಮಾತು

One day workshop Mandya
Published on

ಮಂಡ್ಯ: ಕಚೇರಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಎದುರಾದರೆ ಅಂಜಿಕೆ ಪಡದೇ ಕಾನೂನಿನ ರಕ್ಷಣೆ ಪಡೆದುಕೊಳ್ಳಿ ಎಂದು ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ ಸಲಹೆ ನೀಡಿದರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಲೈಂಗಿಕ ದೌರ್ಜನ್ಯ/ಕಿರುಕುಳದಿಂದ ಮಹಿಳೆಯರ ರಕ್ಷಣೆ ಕುರಿತು ಅಧಿಕಾರಿ, ಸಿಬ್ಬಂದಿ, ಆಂತರಿಕ ದೂರು ನಿವಾರಣಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ರಕ್ಷಣೆ ಪಡೆಯಬಹುದಾದ ಮಾರ್ಗಗಳನ್ನು ಕಾರ್ಯಾಗಾರದಲ್ಲಿ ತಿಳಿಸಲಾಗುವುದು. ಅದರ ಮಹತ್ವ ತಿಳಿದು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಕೆಲ ಮಹಿಳೆಯರು ತಾವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಅವರ ಮೇಲಾಗುವ ದೌರ್ಜನ್ಯದ ವಿರುದ್ದ ಹೊರಡಲು ಹಿಂದೆ ಉಳಿಯುತ್ತಾರೆ. ಜತೆಗೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ಅರಿವಿನ ಕೊರತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಲೈಂಗಿಕ ದೌರ್ಜನ್ಯ/ಕಿರುಕುಳದಿಂದ ಮಹಿಳೆಯರ ರಕ್ಷಣೆ ಕುರಿತು ಕಾರ್ಯಾಗಾರದ ಮಹತ್ವವನ್ನು ಎಲ್ಲರೂ ತಿಳಿದು ತಮ್ಮ ಮೇಲಾಗುವ ಕಿರುಕುಳದಿಂದ ರಕ್ಷಣೆ ಪಡೆಯುವ ಕಾಯ್ದೆಗಳನ್ನು ತಿಳಿದುಕೊಳ್ಳಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಎಲ್ಲ ರೀತಿಯ ಮೂಲ ಸೌಲಭ್ಯವನ್ನು ಕೊಡುವುದರ ಜತೆಗೆ ಪ್ರತಿಯೊಬ್ಬರು ಅವರನ್ನು ತಮ್ಮ ತಾಯಿ, ಸಹೋದರಿಯಂತೆ ಗೌರವಿಸಬೇಕು. ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ಅಥವಾ ಕಿರುಕುಳವನ್ನು ತಡೆಗಟ್ಟುವ ಸಲುವಾಗಿ ಕಾನೂನಿನ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ರೂಪಿಸಲಾಗಿದೆ. ಕಾಯ್ದೆಗಿಂತ ಮುಖ್ಯವಾದದ್ದು ನಮ್ಮಲ್ಲಿರುವ ಸಂಸ್ಕಾರ. ಪ್ರತಿ ಹೆಣ್ಣನ್ನು ಗೌರವದಿಂದ ಕಾಣಬೇಕು. ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವನ್ನು ನೀಡಿದ್ದು, ತಾಯಿಯಂತೆ ಕಾಣುತ್ತೇವೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿದರು. ಕಾರ್ಯಾಗಾರದಲ್ಲಿ ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಸಂಪನ್ಮೂಲ ವ್ಯಕ್ತಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ರಿಷಿ ಮದನ್, ಡಾ ಕ್ರಿಷಿನಾ ಕಾಂತಾರಾಜು, ಡಾ.ಸ್ವಪ್ನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net