

ಮಂಡ್ಯ: ಇಂದಿನ ಒತ್ತಡದ ಜೀವನ ನಿವಾರಿಸಿಕೊಳ್ಳಲು ಯೋಗ ಮತ್ತು ಧ್ಯಾನ ಅವಶ್ಯಕ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಅಧಿಕಾರಿಗಳಿಗೆ ಒತ್ತಡ ನಿವಾರಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿದಿನ ಕೆಲಸ ಮುಗಿದ ನಂತರ ನಾವು ಮಾಡುವ ಕೆಲಸ ಆತ್ಮತೃಪ್ತಿ ತರಬೇಕು. ಒತ್ತಡ ಇಲ್ಲದೇ ಕೆಲಸ ನಿರ್ವಹಿಸಲು ಕಲೆ, ಕ್ರೀಡೆ, ಸಾಹಿತ್ಯದಂತಹ ಹವ್ಯಾಸವನ್ನು ರೂಡಿಸಿಕೊಳ್ಳಿ ಎಂದರು.
ಪ್ರೀತಿಯನ್ನು ನಾವೂ ಮಾಡುವ ಕೆಲಸದಲ್ಲಿ ವ್ಯಕ್ತಪಡಿಸಬೇಕು. ಆತ್ಮಕ್ಕೆ ಜ್ಞಾನ, ಶಾಂತಿ, ನೆಮ್ಮದಿ, ಆತ್ಮತೃಪ್ತಿಯ ಹಸಿವು ಬೆಳೆಯುವಂತೆ ನೋಡಿಕೊಳ್ಳಿ. ಜ್ಞಾನ, ಶಾಂತಿ, ನೆಮ್ಮದಿ, ಆತ್ಮತೃಪ್ತಿಯನ್ನು ಖರೀದಿಸಲು ನಾವೇ ಬೆಳೆಸಿಕೊಳ್ಳಬೇಕು. ಇವುಗಳನ್ನು ಜೀವನದಲ್ಲಿ ರೂಡಿಸಿಕೊಂಡರೆ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿದಿನ ಕೆಲಸದ ನಂತರ ಕುಟುಂಬದೊಂದಿಗೆ ಸಮಯ ಕಳೆಯಿರಿ. ನಾವು ಮಾಡುವ ಕೆಲಸಕ್ಕೆ ಪ್ರತಿಫಲ ದೊರೆಯುವುದೇ ಕುಟುಂಬದ ಪ್ರೀತಿಯಲ್ಲಿ ಎಂದ ಅವರು, ಉನ್ನತಮಟ್ಟದ ಅಧಿಕಾರಿಗಳು ಸಿಬ್ಬಂದಿ ವರ್ಗದವರಿಗೆ ಒತ್ತಡ ಮುಕ್ತ ಸನ್ನಿವೇಶವನ್ನು ಕಲ್ಪಿಸಿಕೊಡಬೇಕು. ಸರ್ಕಾರಿ ಅಧಿಕಾರಿಗಳು ಇಂದು ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಕೆಲಸ ನಿರ್ವಹಿಸುವ ಸನ್ನಿವೇಶ ಸೃಷ್ಟಿಯಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಬ್ರಹ್ಮಕುಮಾರಿ ಸಮಾಜದ ಬಿ.ಕೆ.ಶಾರದಾ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಗೌಡ ಇತರರಿದ್ದರು.