

ಮಂಡ್ಯ: ಸಂಘಗಳು ಕೇವಲ ಹಣಗಳಿಕೆಗಷ್ಟೇ ಸೀಮಿತವಾಗದೆ ರಚನಾತ್ಮಕ ಮತ್ತು ಆದಾಯೋತ್ಪನ್ನ ಚಟುವಟಿಕೆಗಳ ಮೂಲಕ ಸಮಾಜಕ್ಕೆ ನೆರವಾಗಬೇಕು ಎಂದು ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ ಕಿವಿಮಾತು ಹೇಳಿದರು.
ತಾಲೂಕಿನ ಉಮ್ಮಡಹಳ್ಳಿಯ ಸಾಂಸ್ಕೃತಿಕ ಭವನದಲ್ಲಿ ನಬಾರ್ಡ್, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಸೋಮವಾರ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಪುಸ್ತಕ ಬರವಣಿಗೆ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಆಹಾರ ಸಂಸ್ಕರಿಸುವ ಯಂತ್ರೋಪಕರಣದ ಪ್ರಯೋಜನವನ್ನು ಗ್ರಾಮೀಣ ಮಹಿಳೆಯರು ಪಡೆದುಕೊಳ್ಳಬೇಕು. ಆತ್ಮ ನಿರ್ಬರ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ನಿಯಮಗಳಿಗೊಳಪಟ್ಟು ಕೃಷಿ ಆಹಾರ ಪದಾರ್ಥಗಳನ್ನು ಸಂಸ್ಕರಣೆ ಮಾಡಲು ಸಹಾಯಧನವನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು ಸ್ವಸಹಾಯಸಂಘಗಳ ಪ್ರತಿನಿಧಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಗಳು ಕಾಲಕ್ಕನುಗುಣವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಸ್ವಸಹಾಯ ಸಂಘಗಳ ಪ್ರತಿನಿಧಿ ಅಥವಾ ಸದಸ್ಯರು ಅದರ ಮನವರಿಕೆಯನ್ನು ಅರ್ಥೈಸಿಕೊಂಡು ಆ ಯೋಜನೆಗಳನ್ನು ಯಾವ ರೀತಿ ಪಡೆದುಕೊಳ್ಳುವುದು ಸೂಕ್ತ. ಗ್ರಾಮೀಣ ಜನರಿಗೆ ಸಮರ್ಪಕ ಮಾಹಿತಿ ಕೊರತೆಯಿಂದಾಗಿ ಹಲವು ಯೋಜನೆಗಳು ಕಡೇ ಭಾಗದ ಕೃಷಿ ರೈತ ಮಹಿಳೆಯರಿಗೆ ತಲುಪುತ್ತಿಲ್ಲ. ಇದು ವಿಷಾದನೀಯ. ಸ್ವಸಹಾಯ ಸಂಘಗಳ ಬಲವರ್ಧನೆ ಮತ್ತು ರಚನೆ, ಪುನಶ್ಚೇತನಕ್ಕೆ ಅನುಕೂಲವಾಗಲು ಈ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಯ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಂಡಿದ್ದೇವೆ. ಸ್ವಸಹಾಯ ಸಂಘಗಳ ಪ್ರತಿನಿಧಿಗಳಲ್ಲಿರುವ ಅನುಮಾನ ಮತ್ತು ಸಮಸ್ಯೆಗಳ ನಿವಾರಣೆಗೆ ಲಿಖಿತವಾಗಿ ಸಾಲ ಪಡೆದುಕೊಳ್ಳುವ ವಿಧಾನ ಹಾಗೂ ಕಟ್ಟು ವಿಧಾನವನ್ನು ದಾಖಲಿಸುವ ಪ್ರಮೇಯ ಹಿಂದೆಂದಿಗಿಂತಲೂ ಇಂದು ಇದೆ. ಆದ್ದರಿಂದ ಪ್ರತಿಯೊಬ್ಬ ಸ್ವಸಹಾಯ ಸಂಘದ ನಾಯಕರು ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ಎರಡು ಎಕರೆ ಜಾಗದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಯೋಜನೆಯನ್ನು ಸಿದ್ಧಪಡಿಸಿ ರಪ್ತು ನಿಗಮದಿಂದ ಆಹಾರ ಸಂಸ್ಕರಿಸುವ ಯಂತ್ರೋಪಕರಣಗಳು ಮತ್ತು ಅದನ್ನು ಮಾರುಕಟ್ಟೆ ಮಾಡುವ ಯೋಜನೆ ಸಿದ್ಧಪಡಿಸಿದೆ. ಶೇ.10ರಷ್ಟನ್ನು ಆರ್‌ಎಪಿಸಿಎಂಎಸ್ ನೀಡಿದರೆ, ಉಳಿದ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಮಂಡ್ಯ-ಬೆಂಗಳೂರು ಹೆದ್ದಾರಿ ಪಕ್ಕದ ಜಾಗದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ನಬಾರ್ಡ್ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಜನರ ಆದಾಯೋತ್ಪನ್ನ ಚಟುವಟಿಕೆಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಸರ್ಕಾರಗಳ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬ್ಯಾಂಕ್ ಬರೋಡದ ಆರ್ಥಿಕ ಸಮಾಲೋಚಕಿ ಕೆ.ಪಿ.ಅರುಣಕುಮಾರಿ, ವಿಬ್‌ಸೆಟಿ ಉಪನ್ಯಾಸಕ ಪುರಂದರ್, ಕುಶಲಕರ್ಮಿ ಅನ್ನಪೂರ್ಣ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯ, ಪಿಡಿಒ ಮಂಜುನಾಥ್, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಲೋಹಿತ್, ಸಿಇಒ ಶಂಕರೇಗೌಡ, ನಿರ್ದೇಶಕರಾದ ಶಿವಶಂಕರ್, ಸಿದ್ದರಾಮು ಇತರರಿದ್ದರು.