ಗುಣಮಟ್ಟದ ಶಿಕ್ಷಣದಿಂದ ಖಾಸಗಿ ಸಂಸ್ಥೆಗೆ ಪೈಪೋಟಿ: ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಅಭಿಮತ

One Day State Level Workshop for Teachers Mandya
Published on

ಮಂಡ್ಯ: ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಆವಿಷ್ಕಾರ, ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ಹೆಚ್ಚಾಗಲಿ. ಈ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡಬೇಕು ಎಂದು ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಸಲಹೆ ನೀಡಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನ(ಸ್ವಾಯತ್ತ)ನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ರೂಸಾ 2.0 ಕಾರ್ಯಕ್ರಮದಡಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಹೆಚ್ಚಳ ಮತ್ತು ಸುಸ್ಥಿರತೆಗಾಗಿ ವಿನೂತನ ಕ್ರಮಗಳು ವಿಷಯ ಕುರಿತು ಅಧ್ಯಾಪಕರಿಗೆ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ವಿಶ್ವವಿದ್ಯಾನಿಲಯಗಳಿಗಿಂತ ಸರ್ಕಾರಿ ವಿವಿಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತಿದೆ. ಇದನ್ನು ಹೋಗಲಾಡಿಸಲು ಸರ್ಕಾರಿ ಸಂಸ್ಥೆಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸೆಮಿನಾರ್, ಕಾರ್ಯಾಗಾರ ತರಬೇತಿಗಳನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಆಯೋಜಿಸಬೇಕು. ಆಗ ಮಾತ್ರ ಸರ್ಕಾರಿ ಸಂಸ್ಥೆಗಳು ಉತ್ಕೃಷ್ಟ ಗೊಳ್ಳುತ್ತವೆ. ಪ್ರತಿ ಅಧ್ಯಾಪಕರು ಶಿಕ್ಷಣದಲ್ಲಿ ಸಂಶೋಧನೆಯನ್ನು ಆಳವಡಿಸಿಕೊಳ್ಳುವ ಮೂಲಕ ತಮ್ಮ ಕಾರ್ಯದಕ್ಷತೆಯನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಾಪಕರು ವಿದ್ಯಾರ್ಥಿಗಳಿಗೆ ಉನ್ನತ ಜ್ಞಾನ ಕಲಿಸಬೇಕಾದರೆ ಮೊದಲು ಜಗತ್ತಿನಲ್ಲಿ ಉಂಟಾಗುತ್ತಿರುವ ಹೊಸ ಹೊಸ ವಿಷಯಗಳ ಬಗ್ಗೆ ಹೆಚ್ಚು ಅಧ್ಯಯನ ಚಿಂತನ ಮಂಥನವನ್ನು ಶಿಕ್ಷಕರು ಮಾಡಬೇಕು. ಆಗ ಮಾತ್ರ ಉತ್ತಮ ಅಧ್ಯಾಪಕನಾಗುತ್ತಾನೆ. ಅಧ್ಯಾಪಕರು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರು ತಾವು ನಡೆದು ಬಂದ ದಾರಿಯನ್ನು ಮರೆಯಬಾರದು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗುರುರಾಜ ಪ್ರಭು ಮಾತನಾಡಿ, ಅಧ್ಯಾಪಕರು ಸಬಲೀಕರಣರಾಗಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬಹುದು. ಶಿಕ್ಷಣ ವೃತ್ತಿ ಇತರೆ ವೃತ್ತಿಗಿಂತ ತುಂಬಾ ಶ್ರೇಷ್ಟ. ಸಮಾಜದ ಬದಲಾವಣೆಯಲ್ಲಿ ಮಹತ್ತರವಾದ ಕೊಡುಗೆ ನೀಡುವ ಕೆಲಸವಾಗಿದೆ. ಅಧ್ಯಾಪಕರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಒಂದು ಸಂಸ್ಥೆಯ ಬೆಳವಣಿಗೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಆ ಸಂಸ್ಥೆ ಸರ್ವತೋಮುಖ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಶ್ರೀನಿವಾಸ್, ಮೈಸೂರು ಜೆಎಸ್‌ಎಸ್ ಅಕಾಡೆಮಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಡಾ.ಕೆ.ರವೀಶ, ಐಕ್ಯೂಎಸಿ ಸಂಚಾಲಕಿ ಪ್ರೊ.ಬಿ.ಜಯಲಕ್ಷ್ಮೀ, ಐ ಕ್ಯೂಎಸಿ ಸಹ ಸಂಚಾಲಕಿ ಶಿರಾನ್‌ತಾಜ್, ರೂಸಾ ಸಂಯೋಜಕಿ ಡಾ.ಕೆ.ಎಂ.ಮಂಗಳಮ್ಮ, ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಸಮಾಜಶಾಸ್ತ್ರ ಪ್ರಾಧ್ಯಾಪಕ ಮನ್ಸೂರ್ ಪಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net