

ಮಂಡ್ಯ: ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಮಹಿಳಾ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಸುಪ್ರಿತಾ ಎಂ.ಆನಂದ್ ಮಂಗಳವಾರ ಒಂದು ದಿನ ಜಿಲ್ಲಾ ಕ್ರೀಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 18 ರಿಂದ 23 ವರ್ಷದೊಳಗಿನ ಯುವತಿಯರು ‘ತಮಗೆ ಸ್ಫೂರ್ತಿದಾಯಕವಾಗಿರುವ’ 30 ಸೆಕೆಂಡ್‌ನಿಂದ 1 ನಿಮಿಷ ಕಾಲಾವಧಿಯ ವಿಡಿಯೋ ಕಳುಹಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 12 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಮಂಡ್ಯದ ಅರ್ಕೇಶ್ವರನಗರದ ನಿವಾಸಿ ಸುಪ್ರಿತಾ ಆಯ್ಕೆಯಾಗಿದ್ದರು. ಅದರಂತೆ ವಿದ್ಯಾರ್ಥಿನಿ ಬೆಳಗ್ಗೆ 10ರಿಂದ ಸಂಜೆ 5.30 ರವರೆಗೆ ಕರ್ತವ್ಯ ನಿರ್ವಹಿಸಿದರು. ಜತೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್ ಅವರ ಕಾರ್ಯವೈಖರಿ ವೀಕ್ಷಿಸಿದರು.
ಈ ಕುರಿತು ತಮ್ಮ ಅನುಭವ ಹಂಚಿಕೊಂಡ ಸುಪ್ರೀತಾ ಎಂ.ಆನಂದ್, ಒಂದು ದಿನ ಕ್ರೀಡಾಧಿಕಾರಿಯಾಗಿ ಆಯ್ಕೆಯಾದಂತಹ ವಿಷಯವನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ಬೆಳಗ್ಗೆ 10 ಗಂಟೆಗೆ ಕಚೇರಿಗೆ ಭೇಟಿ ನೀಡಿದಾಗ ವಿಶೇಷವಾಗಿ ನನ್ನನ್ನು ಸ್ವಾಗತ ಮಾಡಿಕೊಂಡರು. ನಂತರ ಎಲ್ಲ ಸಿಬ್ಬಂದಿಯನ್ನು ಪರಿಚಯಿಸಿ ಕ್ರೀಡಾ ಇಲಾಖೆಯಲ್ಲಿನ ಕಾರ್ಯವೈಖರಿ ಬಗ್ಗೆ ತಿಳಿಸಿದರು. ಕ್ರೀಡಾಧಿಕಾರಿ ಯಾವ ರೀತಿಯಾಗಿ ಕಾರ್ಯನಿರ್ವಹಿಸಬಹುದು ಎಂಬುವಂತಹ ಅನುಭವವನ್ನು ನಾನು ಪಡೆದುಕೊಂಡಿದ್ದು ಸಂತಸ ತಂದಿದೆ ಎಂದರು.
ಕ್ರೀಡಾ ಇಲಾಖೆಯಲ್ಲಿ ನೀಡುವಂತಹ ಯೋಜನೆಗಳು ಹಾಗೂ ಕ್ರೀಡಾಪಟುಗಳಿಗೆ ಯಾವ ರೀತಿಯಾಗಿ ಮೂಲಸೌಕರ್ಯಗಳನ್ನು ಒಳಗೊಂಡಂತೆ ಪ್ರೋತ್ಸಾಹಿಸುವಂತಹ ಪರಿಯನ್ನು ಅರಿತುಕೊಂಡೆ. ಇದಲ್ಲದೆ ನಾನು ಓದುತ್ತಿರುವ ಕಾಲೇಜಿಗೆ ಮುಖ್ಯ ಅತಿಥಿಯಾಗಿ ನನ್ನನ್ನು ಕರೆದುಕೊಂಡು ಹೋದಾಗ ಸ್ನೇಹಿತರು ನನ್ನನು ನೋಡಿ ಬಹಳ ಆಶ್ಚರ್ಯಪಟ್ಟರು. ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ ಸಿಇಒ ಶಾಂತಾ ಎಲ್.ಹುಲ್ಮನಿ ಅವರು ನನಗೆ ಅಭಿನಂದನೆ ಸಲ್ಲಿಸಿ, ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆ ಎಂದರು. ಈ ವಿಷಯವನ್ನು ಕೇಳಿ ನಾನು ಉತ್ತಮ ಸಾಧನೆ ಮಾಡಬೇಕು ಎಂಬ ಉತ್ಸಾಹ ಮೂಡಿತು ಎಂದು ವಿವರಿಸಿದರು.
ನಂತರ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರ ಕಚೇರಿಗೆ ಭೇಟಿ ನೀಡಿದಾಗ ಪ್ರೀತಿಯಿಂದ ಸ್ವಾಗತಿಸಿ 30 ನಿಮಿಷ ಸಮಯವನ್ನು ನನಗೆ ಮೀಸಲಿಟ್ಟು ಕೆಲವು ಪ್ರಶ್ನೆಗಳನ್ನು ಕೇಳಿದರು, ನಾನು ಅದಕ್ಕೆ ಉತ್ತರಿಸಿದೆ. ಈ ವೇಳೆ ಭಾರತ ಸಂವಿಧಾನ ಪುಸ್ತಕವನ್ನು ಉಡುಗೊರೆಯಾಗಿ ನೀಡಿ. ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಕಾರ ನೀಡುತ್ತೇನೆಂದು ಆಶ್ವಾಸನೆ ನೀಡಿದರು. ಕ್ರೀಡಾಧಿಕಾರಿಯಾಗಿ ಕಾರ್ಯವೈಖರಿಯನ್ನು ತಿಳಿದುಕೊಂಡಿದ್ದು, ನನ್ನ ಜೀವನದಲ್ಲಿ ಈ ದಿನವನ್ನು ಮರೆಯಲಾಗದು. ನನ್ನ ಪಾಲಕರು ಬಹಳ ಸಂತಸಪಟ್ಟಿದ್ದಾರೆ. ಮುಂದಿನ ದಿನದಲ್ಲಿ ನಾನು ಸಹ ಒಬ್ಬ ಉತ್ತಮ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ದೃಢಸಂಕಲ್ಪವನ್ನು ಮಾಡಿದ್ದೇನೆ ಎಂದು ಸುಪ್ರಿತಾ ಹೇಳಿದರು.