ನೀರನ್ನು ಮಿತ ಬಳಕೆಯ ಜಾಗೃತಿ ಮೂಡಿಸಿ: ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿಕೆ

One day district level workshop Mandya
Published on

ಮಂಡ್ಯ: ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿನ ಗ್ರಾಮಗಳಿಗೆ ದಿನದ 24 ಗಂಟೆ ನೀರನ್ನು ಒದಗಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನೀರನ್ನು ಮಿತವಾಗಿ ಬಳಸಲು ಹಾಗೂ ಜೀವಜಲದ ಮಹತ್ವ ತಿಳಿಸಲು ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಪಂ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮೀಣಾ ಪ್ರದೇಶ ಸುಸ್ಥಿರ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಗ್ರಾಮ ಪಂಚಾಯಿತಿ ಪಾತ್ರ, ಕರ್ನಾಟಕ ಸುಸ್ಥಿರ ಗ್ರಾಮೀಣಾ ಕುಡಿಯುವ ನೀರು ಸರಬರಾಜು ಕಾರ್ಯಕ್ರಮದ ಅನುಷ್ಠಾನ ಮತ್ತು 24*7 ನೀರು ಸರಬರಾಜು ಗ್ರಾಮಗಳ ಘೋಷಣೆ ಕುರಿತಂತೆ ಜಿಲ್ಲಾಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜನರಿಗೆ ಮೂಲ ಸೌಕರ್ಯವನ್ನು ಒದಗಿಸುವುದು ಎಷ್ಟು ಮುಖ್ಯವೋ ಅವುಗಳ ನಿರ್ವಹಣೆಯು ಅಷ್ಟೇ ಮುಖ್ಯವಾಗಿರುತ್ತದೆ. 24*7 ಜನರಿಗೆ ನೀರನ್ನು ಒದಗಿಸುವಲ್ಲಿ ಸಮಸ್ಯೆ ಉಂಟಾಗದಂತೆ ಸುಸ್ಥಿರವಾಗಿ ಕೆಲಸ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಾರ್ವಜನಿಕರಿಗೆ ಸರಬರಾಜು ಮಾಡುವ ನೀರಿನಲ್ಲಿ ಇತರೆ ಕಲುಷಿತ ನೀರು ಮಿಶ್ರಿತವಾಗುತ್ತಿರುವುದು ಕಂಡು ಬಂದಿದೆ. ಆದ್ದರಿಂದ ನೀರಿನ ಪೈಪ್‌ಲೈನ್ ಪರಿಶೀಲಿಸಿ. ಈ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ ಒಂದು ತಿಂಗಳಿನಲ್ಲಿ ಮಾಹಿತಿ ನೀಡಿ. ಮುಖ್ಯವಾಗಿ ಕಲುಷಿತ ನೀರು ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ಮಿಶ್ರಿಣವಾಗದಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿಸಿ. ಕುಡಿಯುವ ನೀರು ಕಲುಷಿತವಾದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿರುತ್ತದೆ. ಕುಡಿಯುವ ನೀರಿನ ಶುದ್ಧತೆಯನ್ನು ಪ್ರತಿದಿನ ಪರಿಶೀಲಿಸಿ ನೀರಿನ ಪರಿಶೀಲನೆಯಲ್ಲಿ ವೈಫಲ್ಯತೆ ಉಂಟಾದಲ್ಲಿ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗ್ರಾಮಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲು ನಿರ್ಧರಿಸಿರುವುದರಿಂದ ವಾಟರ್‌ಮನ್‌ಗಳು ನೀರು ವ್ಯರ್ಥವಾಗದಂತೆ ಗಮನಿಸಲು ಹಾಗೂ ನೀರು ಬಿಡುಗಡೆಯಲ್ಲಿ ಲೋಪ ಉಂಟಾಗದಂತೆ ಕೆಲಸ ನಿರ್ವಹಿಸಬೇಕು. ಗ್ರಾಮಗಳಿಗೆ 24*7 ನೀರು ಸರಬರಾಜಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಾಯೋಗಿಕವಾಗಿ ಜಿಲ್ಲೆಯ 5 ಗ್ರಾಮಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಸರಬರಾಜಿನಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಿಲ್ಲ ತಿಳಿಸಿ ಎಂದರು.

ಪೈಪ್‌ಲೈನ್‌ಗೆ ಸಂಬಂಧಿಸಿದಂತೆ ಉಂಟಾಗುವ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಮನೆ ಮನೆಗೆ ತಲುಪಿ ಬಗೆಹರಿಸುವ ಸಲುವಾಗಿ ಉಪಕರಣಗಳನ್ನು ಒಳಗೊಂಡಂತೆ ಪ್ರತಿ ತಾಲೂಕಿನಲ್ಲಿ ಐಟಿಐ, ಇಂಜಿನಿಯರಿಂಗ್ ಮಾಡಿ ಉದ್ಯೋಗವಿಲ್ಲದ ಹೆಣ್ಣುಮಕ್ಕಳನ್ನು ಗುರುತಿಸಿ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತರಬೇತಿ ನೀಡಿ. ಈ ಮೂಲಕ ಉದ್ಯೋಗವಕಾಶ ಕಲ್ಪಿಸಿ ಎಂದು ತಿಳಿ ಹೇಳಿದರು.

ವಿಶ್ವ ಬ್ಯಾಂಕ್‌ನ ಟಾಸ್ಕ್ ಟೀಮ್ ಲೀಡರ್ ಎಂ.ಕುಳ್ಳಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪಕಾರ್ಯದರ್ಶಿ(ಆಡಳಿತ) ಜಾಫರ್ ಷರೀಫ್, ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಮೋದ್ ಸೇರಿದಂತೆ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net