ಮಕ್ಕಳು ದುಶ್ಚಟಗಳಿಂದ ಅಂತರ ಕಾಯ್ದುಕೊಳ್ಳಿ

03raju3
Published on

ಚಾಮರಾಜನಗರ: ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದರ ಕಡೆ ಹೆಚ್ಚಿನ ಆಸಕ್ತಿವಹಿಸಿ ಎಂದು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಹರೀಶ್ ಕುಮಾರ್‌ಶೆಟ್ಟಿ ಸಲಹೆ ನೀಡಿದರು.

ತಾಲೂಕಿನ ದೊಡ್ಡರಾಯಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹದಿ ಹರೆಯದ ಮಕ್ಕಳಲ್ಲಿ ದುಶ್ಚಟ ದುರಭ್ಯಾಸದ ಬಗ್ಗೆ ಜಾಗೃತಿ ವಹಿಸುವ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ. ಇತ್ತೀಚಿಗೆ ಮಕ್ಕಳು ಮೊಬೈಲ್ ಗೀಳು ಹಚ್ಚಿಸಿಕೊಂಡಿದ್ದಾರೆ. ದುಶ್ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಮಕ್ಕಳು ಇದರಿಂದ ದೂರ ಉಳಿದು, ತಂದೆ-ತಾಯಿ, ಗುರು-ಹಿರಿಯರ ಮಾತನ್ನು ಗೌರವಿಸಿ ಉತ್ತಮ ರೀತಿಯ ಶಿಕ್ಷಣ ಪಡೆದು ಸಾಗಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ಮಾತನಾಡಿ, ಹದಿ ಹರೆಯದ ಮಕ್ಕಳು ಸ್ವಲ್ಪ ಎಡವಿದರು, ತಮ್ಮ ಜೀವನ ಹಾಳುಮಾಡಿಕೊಳ್ಳುತ್ತಾರೆ. ಮಕ್ಕಳು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗಬಾರದು. ಈ ಸಮಯದಲ್ಲಿ ಶಿಕ್ಷಣ ಹಾಗೂ ಇನ್ನಿತರೆ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಶಾಲೆಯ ಶಿಕ್ಷಕ ಕೆಂಪಣ್ಣ, ವಲಯದ ಮೇಲ್ವಿಚಾರಕಿ ಮಂಜುಳಾ, ಒಕ್ಕೂಟದ ಪದಾಧಿಕಾರಿ ಸಾವಿತ್ರಮ್ಮ, ಸೇವಾಪ್ರತಿನಿಧಿ ಮಹಾಲಕ್ಷ್ಮಿ, ಲೀಲಾವತಿ ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net