ಎಪಿಎಂಸಿಯಲ್ಲಿ ವಾರದಲ್ಲಿ ಒಂದು ದಿನ ಸಂತೆ

05 HANUR 3
ಹನೂರಿನ ಎಪಿಎಂಸಿಯಲ್ಲಿ ಸಂತೆ ಆರಂಭಿಸುವ ಸಂಬಂಧ ಆಡಳಿತಾಧಿಕಾರಿ ವೈ.ಕೆ ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಬುಧವಾರ ವ್ಯಾಪಾಸ್ಥರು ಹಾಗೂ ವರ್ತಕರ ಸಭೆ ನಡೆಯಿತು. ಬಸವಣ್ಣ, ನಾಗೇಂದ್ರ, ಗಿರೀಶ್‌ಕುಮಾರ್ ಇತರರು ಇದ್ದರು.
Published on

ಹನೂರು: ತರಕಾರಿ ಹಾಗೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿಯೇ ವಾರದಲ್ಲಿ ಒಂದು ದಿನ ಸಂತೆ ಆರಂಭಿಸಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಹಾಯಕ ನಿರ್ದೇಶಕ ಬಸವಣ್ಣ ತಿಳಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಬುಧವಾರ ಸಂತೆ ಆರಂಭಿಸುವ ಸಂಬಂಧ ಆಯೋಜಿಸಿದ್ದ ವ್ಯಾಪಾರಸ್ಥರು ಹಾಗೂ ವರ್ತಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಈ ಹಿಂದೆ ಹನೂರು ಕೊಳ್ಳೇಗಾಲ ತಾಲೂಕಿಗೆ ಒಳಪಟ್ಟಿದ್ದರಿಂದ ಇಲ್ಲಿ ಎಪಿಎಂಸಿಗೆ ಅವಕಾಶವಿರಲಿಲ್ಲ. ತಾಲೂಕು ರಚನೆಯಾದ ಬಳಿಕ ಹನೂರಿನಲ್ಲಿ ಎಪಿಎಂಸಿ ಸ್ಥಾಪಿಸಿದ್ದು, ರಾಜ್ಯದಲ್ಲೇ ಹೆಚ್ಚು ವಿಸ್ತಾರವನ್ನು ಹೊಂದಿರುವ ಎಪಿಎಂಸಿ ಇದಾಗಿದೆ. ಆದರೆ ಸಮರ್ಪಕವಾಗಿ ಬಳಕೆಗೆ ಬರುತ್ತಿಲ್ಲ. ಈ ಭಾಗದಲ್ಲಿ ಅರಿಸಿಣ ಹಾಗೂ ಮುಸುಕಿನ ಜೋಳವನ್ನು ಬೆಳೆಯಲಾಗುತ್ತಿದೆ. ಜತೆಗೆ ಲೊಕ್ಕನಹಳ್ಳಿ ಭಾಗದಲ್ಲಿ ತರಕಾರಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ ರೈತರು ತಮಿಳುನಾಡು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ವ್ಯಾಪಾರವನ್ನು ಕೇಂದ್ರೀಕರಿಸುವ, ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಿ ಕೊಡಲು ಹಾಗೂ ಜನರಿಗೆ ಒಂದೇ ಸ್ಥಳದಲ್ಲಿ ಎಲ್ಲ ರೀತಿಯ ಕೃಷಿ ಉತ್ಪನ್ನಗಳನ್ನು ಸಿಗುವಂತೆ ಮಾಡುವ ಉದ್ದೇಶದಿಂದ ವಾರದಲ್ಲಿ ಒಂದು ದಿನ ಸಂತೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈಗಾಗಲೇ ಮಾರಾಟ ಮಾಡುತ್ತಿರುವ ಕೃಷಿ ಉತ್ಪನ್ನಗಳನ್ನು ಸಂತೆಯಲ್ಲಿ ಮಾರಾಟ ಮಾಡುವುದರ ಮೂಲಕ ಸಂತೆಯ ಯಶಸ್ವಿಗೆ ಸಹಕರಿಸಬೇಕು. ಸಂತೆ ನಡೆಸುವ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು. ಮುಂದಿನ ದಿನಗಳಲ್ಲಿ ಸಂತೆಯು ಯಶಸ್ವಿಯಾಗಿ ನಡೆಯುವ ಸಂಬಂಧ ರೈತರು ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಸಭೆ ನಡೆಸಿ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಮೂಲ ಸೌಕರ್ಯಕ್ಕೆ ಒತ್ತಾಯ: ಇದೇ ವೇಳೆ ವ್ಯಾಪರಸ್ಥರು ಹಾಗೂ ವರ್ತಕರು ಮಾತನಾಡಿ, ಎಪಿಎಂಸಿಯಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹಾಗಾಗಿ ಸಿಸಿ ರಸ್ತೆ ನಿರ್ಮಿಸಬೇಕು. ಗೋದಾಮಿನ ಆಸುಪಾಸು ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಸಿಸಿ ಕ್ಯಾಮರಾ ಅಳವಡಿಸಬೇಕು, ಸಮರ್ಪಕ ವಿದ್ಯುತ್ ವ್ಯವಸ್ಥೆಯಾಗಬೇಕು. ವಾಹನಗಳು ಪ್ರವೇಶಿಸುವ ದ್ವಾರವನ್ನು ಸುವ್ಯವಸ್ಥಿತವಾಗಿ ನಿರ್ಮಿಸುವುದರ ಜತೆಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಿ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅಗತ್ಯ ಭರವಸೆ: ಇದಕ್ಕೆ ಬಸವಣ್ಣ ಅವರು ಪ್ರತಿಕ್ರಿಯಿಸಿ, ಎಪಿಎಂಸಿಯಲ್ಲಿ ಈಗಾಗಲೇ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ. ರಸ್ತೆ, ವಿದ್ಯುತ್, ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದ್ದರಿಂದ ಹಂತಹಂತವಾಗಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಕೃಷಿ ಉತ್ಪನ್ನ ಸಮಿತಿ ಆಡಳಿತಾಧಿಕಾರಿ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಕಾರ್ಯದರ್ಶಿ ನಾಗೇಂದ್ರ, ಪಪಂ ಸದಸ್ಯ ಗಿರೀಶ್‌ಕುಮಾರ್, ಮುಖಂಡರಾದ ನಾಗೇಂದ್ರ, ಜಯಪ್ರಕಾಶ್ ಗುಪ್ತ, ರಾಜೇಂದ್ರ ಗುಪ್ತ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net