37 ಗ್ರಾಪಂಗಳಿಗೆ ತಲಾ ಒಂದು ಕೋಟಿ ಅನುದಾನ

One crore grant each to 37 gram panchayats
Published on

ಸವಣೂರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ವಿಶೇಷ ಅನುದಾನದಲ್ಲಿ ಕ್ಷೇತ್ರದ 37 ಗ್ರಾಪಂಗಳಿಗೆ ತಲಾ ಒಂದು ಕೋಟಿ ನೀಡಿ, ಹೆಚ್ಚುವರಿ ಅನುದಾನವನ್ನು ದೇವಸ್ಥಾನಗಳ ಜೀಣೋದ್ಧಾರ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿರಿಸಲಾಗಿದೆ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು.

ತಾಲೂಕಿನ ತೆಗ್ಗಿಹಳ್ಳಿ ಗ್ರಾಪಂ ವ್ಯಾಪ್ತಿಯ ತೆಗ್ಗಿಹಳ್ಳಿ, ನಂದಿಹಳ್ಳಿ, ಮಣ್ಣೂರು ಗ್ರಾಮಗಳಲ್ಲಿ ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ತೆಗ್ಗಿಹಳ್ಳಿ ಗ್ರಾಪಂ ಆವರಣದಲ್ಲಿ ಜಿಪಂ ಹಾಗೂ ತಾಪಂನ 15ನೇ ಹಣಕಾಸು ಯೋಜನೆಯಡಿ ನಿರ್ವಣಗೊಂಡ ತೆಗ್ಗಿಹಳ್ಳಿ ಅರಿವು ಕೇಂದ್ರ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರದ ಜನತೆಯ ಋಣ ತೀರಿಸಲು ಹಗಲಿರುಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಗ್ರಾಮದ ಅಭಿವೃದ್ಧಿಗಾಗಿ, ದೇವಸ್ಥಾನ ನಿರ್ವಣಕ್ಕಾಗಿ ಈಗಾಗಲೇ ಸುಮಾರು 65 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು 80 ಲಕ್ಷ ರೂ. ಅನ್ನು ತೆಗ್ಗಿಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ಎಂದರು.

ತಾಲೂಕಿನಲ್ಲಿ ಬಹುತೇಕ ಶಾಲೆಗಳು ದುರಸ್ತಿಯಲ್ಲಿದ್ದು, 250 ಕೊಠಡಿಗಳ ಅವಶ್ಯಕತೆ ಇದೆ. ಬಹುತೇಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಕೊಠಡಿಗಳ ಕೊರತೆ ಇದೆ. ಈ ಕುರಿತು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಈ ವರ್ಷ 50 ಕೊಠಡಿ ನೀಡುವ ಭರವಸೆ ನೀಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಹಕಾರಿ ಬ್ಯಾಂಕ್ ಆರಂಭಕ್ಕೆ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ, ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ರಾಧವ್ವ ಹರಿಜನ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ತಿಪ್ಪನಗೌಡ ಪಾಟೀಲ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಗ್ರಾಪಂ ಸದಸ್ಯರಾದ ಸೋಮಶೇಖರ ತಳವಾರ, ಗಿರೀಶಗೌಡ ಪಾಟೀಲ, ರಸೂಲ್ ಗುಂಡೂರ, ಶಾಂತಪ್ಪ ಲಮಾಣಿ, ಸುರೇಶಗೌಡ ಪಾಟೀಲ, ಲಲಿತವ್ವ ನೇಗುಣಿ, ಲಕ್ಷ್ಮವ್ವ ಪೂಜಾರ, ದ್ಯಾಮವ್ವ ಪಾಟೀಲ, ಪುಷ್ಪಾ ಮಸಳಿ, ಪ್ರೇಮಾ ಪಾಟೀಲ, ರೇಣುಕಾ ಬೂದಿಹಾಳ, ಲಕ್ಷ್ಮವ್ವ ವಾಲ್ಮೀಕಿ, ಗದಿಗೆಪ್ಪ ಯರೇಸಿಮಿ, ಪ್ರಮುಖರಾದ ಚಂದ್ರಣ್ಣ ಗುದಗಿ, ನಿಂಗಪ್ಪ ಕ್ಷೌರದ, ಪಿಡಿಒ ಜಗದೀಶ ವಡಕಮ್ಮನವರ, ಸಿಬ್ಬಂದಿ ಗಣೇಶ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net