ಕೋಟಿ ರೂ. ವೆಚ್ಚದ ಕಟ್ಟಡ ನಿಷ್ಪ್ರಯೋಜಕ, ನಿರ್ಗತಿಕರಿಗೆ ರಾತ್ರಿ ವಸತಿ ಸೌಲಭ್ಯ

Urva Shelter
Published on

ಹರೀಶ್ ಮೋಟುಕಾನ ಮಂಗಳೂರು

ವಸತಿ ರಹಿತ ನಿರ್ಗತಿಕರಿಗೆ ರಾತ್ರಿ ವಾಸ್ತವ್ಯ ಹೂಡಲು ಕೇಂದ್ರ ಸರ್ಕಾರದ ದೀನ್‌ದಯಾಳ್ ಅಂತ್ಯೋದಯ (ನಲ್ಮ್) ಯೋಜನೆಯಡಿ ಮಹಾನಗರ ಪಾಲಿಕೆ ವತಿಯಿಂದ ನಿರ್ಮಾಣಗೊಂಡಿರುವ ಕೋಟಿ ರೂ. ಮೌಲ್ಯದ ಕಟ್ಟಡಗಳು ನಿಷ್ಪ್ರಯೋಜಕವಾಗಿವೆ. ಕಟ್ಟಡ ಉದ್ಘಾಟನೆಗೊಂಡು ಎರಡು ವರ್ಷವಾದರೂ ಅದನ್ನು ಟೆಂಡರ್ ಮೂಲಕ ನಿರ್ವಹಣಾ ಸಂಸ್ಥೆಗೆ ವಹಿಸಿಕೊಡಲು ಸಾಧ್ಯವಾಗಿಲ್ಲ.

ವಸತಿ ರಹಿತ ನಿರ್ಗತಿಕರಿಗೆ ಎರಡು ವರ್ಷಗಳ ಹಿಂದೆ ಬಂದರ್‌ನಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಉರ್ವದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಅಲ್ಲಿಗೆ ನಿರ್ಗತಿಕರು ಯಾರೂ ಹೋಗುತ್ತಿಲ್ಲ. ಅವರನ್ನು ಅಲ್ಲಿಗೆ ಕರೆದೊಯ್ಯುವ ಪ್ರಯತ್ನವೂ ಅಧಿಕಾರಿ ವರ್ಗದಿಂದ ನಡೆಯುತ್ತಿಲ್ಲ ಎಂಬ ಆರೋಪ ಜನರಿಂದ ವ್ಯಕ್ತವಾಗಿದೆ.

ಬಂದರು ಕಸಬಾ ಬಜಾರ ಸರ್ವೇ ನಂ.143ರಲ್ಲಿ ಒಟ್ಟು 99.80 ಲಕ್ಷ ರೂ. ವೆಚ್ಚದಲ್ಲಿ 504.25 ಚ.ಮೀ. ವಿಸ್ತೀರ್ಣದಲ್ಲಿ ಕಟ್ಟಡದ ನೆಲ ಅಂತಸ್ತು ನಿರ್ಮಿಸಲಾಗಿದೆ. ನೆಲ ಅಂತಸ್ತಿನಲ್ಲಿ 75 ಜನ ಹಾಗೂ ಮೊದಲ ಮಹಡಿಯಲ್ಲಿ 105 ಜನರಿಗೆ ವಾಸಿಸಲು ಅವಕಾಶವಿದೆ. ಆದರೆ ಇನ್ನೂ ನಿರ್ವಹಣೆಗೆ ವಹಿಸಿಕೊಡಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ನಿರ್ಗತಿಕರು ರಸ್ತೆ ಬದಿಯಲ್ಲೇ ಮಲಗುವಂತಾಗಿದೆ.

ಏನೇನು ವ್ಯವಸ್ಥೆ?: ನಿರ್ಗತಿಕ ರಾತ್ರಿ ವಸತಿ ರಹಿತ ನಾಗರಿಕರಿಗೆ ಸ್ನೇಹಿ ವಸತಿ ವ್ಯವಸ್ಥೆಯ ಕಟ್ಟಡದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸ್ನಾನಗೃಹ, ಶೌಚಗೃಹ, ಕುಡಿಯುವ ನೀರು, ಟಿ.ವಿ., ಫ್ಯಾನ್, ಮಲಗಲು ಮಂಚ, ಬೆಡ್‌ಶೀಟ್, ತಲೆದಿಂಬು ಮುಂತಾದ ಸೌಲಭ್ಯಗಳಿವೆ.

ಯಾರು ನಿರ್ಗತಿಕ ವಸತಿ ರಹಿತರು?: ಯಾವುದೋ ಕಾರಣದಿಂದ ಊರು ಬಿಟ್ಟು ಬಂದು ಅಥವಾ ಸಂಬಂಧಿಕರೇ ಇಲ್ಲದೆ ನಗರದಲ್ಲಿ ಹಗಲಿನ ವೇಳೆ ಕೆಲಸ ಮಾಡಿ ರಾತ್ರಿ ವೇಳೆ ಬಸ್, ರೈಲು, ಅಂಗಡಿಗಳ ಎದುರು, ರಸ್ತೆ ಬದಿ, ಮೈದಾನಗಳಲ್ಲಿ ಮಲಗುವವರು ನಿರ್ಗತಿಕ ರಾತ್ರಿ ವಸತಿ ರಹಿತರ ಸಾಲಿಗೆ ಬರುತ್ತಾರೆ. ಅವರಿಗೆ ಈ ವಸತಿ ರಹಿತ ನಿರ್ಗತಿಕರ ವಸತಿ ಕಟ್ಟಡದಲ್ಲಿ ವಾಸ್ತವ್ಯ ಮಾಡಲು ಅವಕಾಶವಿದೆ. ಬಂದರ್‌ನಲ್ಲಿರುವ ವಸತಿಗೃಹದಲ್ಲಿ 18 ಪುರುಷರು ಹಾಗೂ ಉರ್ವದಲ್ಲಿ ಇಬ್ಬರು ಮಹಿಳೆಯರು ವಾಸವಿದ್ದಾರೆ ಎಂದು ಮಹಾನಗರ ಪಾಲಿಕೆ ಅಧಿಕಾರಿ ಚಿತ್ತರಂಜನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ನಿರ್ವಹಣೆ ಹೇಗೆ?: ನಿಯಮ ಪ್ರಕಾರ ನಿರ್ಗತಿಕ ರಾತ್ರಿ ವಸತಿ ರಹಿತ ಕಟ್ಟಡವನ್ನು ನಿರ್ವಹಣೆಗೆ ಟೆಂಡರ್ ಕರೆದು ಎನ್‌ಜಿಒ ಸಂಸ್ಥೆಗೆ ನೀಡಬೇಕು. ನೂತನ ಕಟ್ಟಡ ನಿರ್ವಹಣೆಗೆ ಯಾರೂ ಟೆಂಡರ್ ವಹಿಸಿಕೊಂಡಿಲ್ಲ. ಸದ್ಯ ಮಹಾನಗರ ಪಾಲಿಕೆ ನಿರ್ವಹಣೆ ಹೊಣೆ ಹೊತ್ತಿದೆ. ನಿಯಮಾವಳಿ ಪ್ರಕಾರ ಟೆಂಡರ್ ವಹಿಸಿಕೊಳ್ಳುವವರು ನಿರ್ಗತಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಮೂರು ವರ್ಷ ಅನುಭವ ಹೊಂದಿರಬೇಕು. ಇದರಿಂದ ಯಾರಿಗೂ ಟೆಂಡರ್ ವಹಿಸಿಕೊಳ್ಳಲಾಗುತ್ತಿಲ್ಲ. ಇದನ್ನು ಮನಗಂಡು ನಿಯಮಾವಳಿ ಸಡಿಲಿಕೆ ಮಾಡಿ ಎರಡು ವರ್ಷ ಅನುಭವ ಹೊಂದಿರಬೇಕು ಎಂದು ಮಾಡಲಾಗಿದೆ. ಪ್ರಸಕ್ತ ಮೈಸೂರಿನ ಸಂಸ್ಥೆ ಟೆಂಡರ್ ವಹಿಸಿಕೊಂಡಿದ್ದು ಅನುಭವಕ್ಕೆ ಸಂಬಂಧಿತ ದಾಖಲಾತಿ ಪರಿಶೀಲನೆ ಹಂತದಲ್ಲಿದೆ ಎಂದು ಚಿತ್ತರಂಜನ್ ಮಾಹಿತಿ ನೀಡಿದ್ದಾರೆ.

500ಕ್ಕಿಂತಲೂ ಅಧಿಕ ನಿರ್ಗತಿಕರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 500ಕ್ಕಿಂತಲೂ ಅಧಿಕ ನಿರ್ಗತಿಕರಿದ್ದಾರೆ. ರಾತ್ರಿ ವೇಳೆ ನಗರದಲ್ಲಿ ಸುತ್ತು ಹೊಡೆದರೆ ಸಾರ್ವಜನಿಕ ಸ್ಥಳ, ಅಂಗಡಿಗಳ ಎದುರು, ಹಳೇ ಕಟ್ಟಡಗಳಲ್ಲಿ ಮಲಗಿರುತ್ತಾರೆ. ನೆಹರು ಮೈದಾನ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಗತಿಕರು ಕಂಡುಬರುತ್ತಾರೆ. ಕಳೆದ ವರ್ಷ ಕರೊನಾ ಲಾಕ್‌ಡೌನ್ ಸಂದರ್ಭ ಈ ನಿರ್ಗತಿಕರು ಆಹಾರಕ್ಕಾಗಿ ಪರದಾಡಿದ್ದರು. ಆ ಸಂದರ್ಭ ಅವರಿಗೆ ಪುರಭವನದಲ್ಲಿ ಆಹಾರ ಪೂರೈಕೆಗೆ ಅವಕಾಶ ಕಲ್ಪಿಸಲಾಗಿತ್ತು.

ಮಂಗಳೂರು ನಗರದಲ್ಲಿ ನಿರ್ಗತಿಕರ ಸಂಖ್ಯೆ ಹೆಚ್ಚಿರುವುದು ನಿಜ. ಅವರಿಗಾಗಿ ನಿರ್ಮಾಣಗೊಂಡಿರುವ ವಸತಿಗೃಹ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಸಮಸ್ಯೆಯಾಗಿದೆ. ಆದರೂ ಮಹಾನಗರ ಪಾಲಿಕೆ ವತಿಯಿಂದಲೇ ನಿರ್ವಹಣೆ ಮಾಡಿಕೊಂಡು ಕೆಲವು ಮಂದಿಗೆ ಅಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರೇಮಾನಂದ ಶೆಟ್ಟಿ ಮಂಗಳೂರು ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net