

ಆನಂದಪುರ: ನಮ್ಮ ಸುತ್ತಲಿನ ಪರಿಸರವನ್ನು ಪ್ರೀತಿಸಿದರೆ ಶ್ರೇಷ್ಠ ವ್ಯಕ್ತಿತ್ವ ಸಿದ್ಧಿಸುತ್ತದೆ ಎಂದು ಖ್ಯಾತ ಪರಿಸರ ಪ್ರೇಮಿ ಚಕ್ರವಾಕ ಸುಬ್ರಹ್ಮಣ್ಯ ತಿಳಿಸಿದರು.
ಗುರುವಾರ ಸಮೀಪದ ಮುರುಘಾ ಮಠದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಪರಿಸರದ ಮಹತ್ವ ಅರಿತುಕೊಳ್ಳಬೇಕು. ಪ್ಲಾಸ್ಟಿಕ್ ಎಂಬ ರಕ್ಕಸನ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಜೀವನ ಶೈಲಿಯಲ್ಲಿ ಬದಲಿಸಿಕೊಳ್ಳಬೇಕಾಗಿದೆ. ಪರಿಸರದ ಮೇಲಿನ ದಬ್ಬಾಳಿಕೆಯಿಂದ ಇಂದು ಋತುಮಾನದಲ್ಲಿ ಏರುಪೇರಾಗುತ್ತಿದೆ. ಮಳೆ ಕೊರತೆ, ಬರಗಾಲದ ಪರಿಸ್ಥಿತಿಗೆ ಪರಿಸರ ಮಾಲಿನ್ಯ ಮತ್ತು ಪರಿಸರ ಮೇಲಿನ ದೌರ್ಜನ್ಯವೇ ಕಾರಣ ಎಂದರು.
ಗೋಷ್ಠಿಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ನಮ್ಮ ಹಿರಿಯರು ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಿದ್ದರು. ನಮ್ಮ ಹಬ್ಬಗಳಲ್ಲಿ ಪರಿಸರ ಪೂಜೆಯೇ ಪ್ರಧಾನವಾಗಿ ಅಡಕವಾಗಿದೆ. ನಾಗರೀಕತೆಯ ಮೌಲ್ಯಗಳು ವಿದ್ಯಾರ್ಥಿಗಳ ಮೂಲಕ ಪುನರುಜ್ಜೀವನಗೊಳ್ಳುತ್ತಾ ಮುಂದಿನ ಪೀಳಿಗೆಗೆ ಸಾಗಬೇಕಾದ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಆನಂದಪುರ ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಶ್ರೀಮಠದ ವಿದ್ಯಾರ್ಥಿಯಾಗಿ ಸಂಸ್ಕಾರ ಪಡೆದು ಸಮಾಜ ಸೇವಾ ಮನೋಭಾವ ಬೆಳೆಸಿಕೊಂಡಿದ್ದನ್ನು ಸ್ಮರಿಸಿದರು. ಉಪಾಧ್ಯಕ್ಷೆ ರೂಪಾ ನಾಗರಾಜ ಮಾತನಾಡಿ ಶ್ರೀಮಠದ ವಿದ್ಯಾರ್ಥಿಗಳ ಶಿಸ್ತು ಮತ್ತು ಇಲ್ಲಿನ ನಿರಂತರ ದಾಸೋಹ ಶ್ಲಾಘನೀಯ ಎಂದರು.