

ನೆಲಮಂಗಲ : ಗ್ರಂಥಾಯಲಗಳು ದೇವಾಲಯಗಳಿದ್ದಂತೆ. ಹಣ ಕಳೆದು ಹೋಗಬಹುದು. ಆದರೆ ಪುಸ್ತಕಗಳಿಂದ ಪಡೆದ ಜ್ಞಾನ ಕಳೆದು ಹೋಗಲು ಸಾಧ್ಯವೇ ಇಲ್ಲ ಎಂದು ಇನ್ನರ್ ವ್ಹೀಲ್ ಅಧ್ಯಕ್ಷೆ ಎನ್.ಎಸ್.ಪೂರ್ಣಿಮಾ ಸುಗ್ಗರಾಜು ತಿಳಿಸಿದರು.
ನಗರದ ಸೊಂಡೇಕೊಪ್ಪ ಮುಖ್ಯರಸ್ತೆ ಶ್ರೀ ಸಿದ್ಧಲಿಂಗ ಪ್ರಥಮದರ್ಜೆ ಕಾಲೇಜಿನಲ್ಲಿ ರೋಟರಿ ಇನ್ನರ್ವ್ಹೀಲ್ ಸಂಸ್ಥೆಯಿಂದ ಕಾಲೇಜು ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಯುವ ಸಮುದಾಯ ಮೊಬೈಲ್ ಚಟದಿಂದ ಗ್ರಂಥಾಲಯಗಳನ್ನು ಮರೆತಿದೆ. ಒಂದು ಪುಸ್ತಕ ನೂರು ಸ್ನೇಹಿತರಿಗೆ ಸಮಾನವಾಗಿದ್ದು, ಪುಸ್ತಕಗಳನ್ನು ಓದಿದಷ್ಟು ಜ್ಞಾನಮಟ್ಟ ಹೆಚ್ಚಾಗುತ್ತದೆ ಎಂಬುದನ್ನು ಯುವ ಜನತೆ ಅರ್ಥೈಸಿಕೊಳ್ಳಬೇಕು. ಜತೆಗೆ ಗ್ರಂಥಾಲಯಗಳು ಜ್ಞಾನದ ಕೇಂದ್ರಗಳಾಗಿದ್ದು, ಸಮಾಜದ ಅಂಕುಡೊಂಕು ತಿದ್ದಲು ಹಾಗೂ ರಚನಾತ್ಮಕ ಸಮಾಜ ಕಟ್ಟಲು ಪುಸ್ತಕಗಳು ಬೇಕಿವೆ ಎಂದರು.
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 100ಕ್ಕೂ ಹೆಚ್ಚು ವಿವಿಧ ಬಗ್ಗೆಯ ಪುಸ್ತಕಗಳನ್ನು ಕಾಲೇಜಿಗೆ ಹಸ್ತಾಂತರ ಮಾಡಲಾಗಿದೆ. ವಿದ್ಯಾರ್ಥಿಗಳು ಸರಿಯಾದ ರೀತ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದರು.
ಪ್ರಾಂಶುಪಾಲ ಡಾ.ಕೆ.ಎನ್.ಅಮರೇಂದ್ರ ಮಾತನಾಡಿ, ಮನುಕುಲದ ಉದ್ಧಾರಕ್ಕೆ ಪುಸ್ತಕಗಳ ಕೊಡುಗೆ ಅಪಾರ. ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಸಾಹಿತ್ಯ, ಸಂಸತಿಯ ಕೃತಿಗಳನ್ನು ಓದಬೇಕು. ಜ್ಞಾನ ವಿಸ್ತಾರಕ್ಕೆ ಪೂರಕವಾದ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಪುಸ್ತಕ ಚಿಕ್ಕದಾಗಿದ್ದರೂ ಅದರೊಳಗಿನ ಮೌಲ್ಯ ಹಾಗೂ ವಿಚಾರ ಬಹಳಷ್ಟಿದೆ. ರೋಟರಿ ಸಂಸ್ಥೆ ವಿದ್ಯಾರ್ಥಿಗಳ ಜ್ಞಾನಾರ್ಜನೆ ಪುಸ್ತಕ ನೀಡಿರುವುದು ಮಾದರಿ ಎನಿಸಿದೆ ಎಂದರು. ಕಾಲೇಜು ಪ್ರಾಧ್ಯಾಪಕ ಡಾ.ಜಿ.ಗಂಗರಾಜು, ಪ್ರೊ.ವಿಜಯದುಗ್ಗಪ್ಪ, ಗ್ರಂಥಾಲಯ ಪಾಲಕ ಎಂ.ಸಿ.ಪಾಟೀಲ್ , ಸಿಬ್ಬಂದಿ ಸುರೇಶ್ ಇದ್ದರು.