

ಹುಬ್ಬಳ್ಳಿ: ಕೋಳಿ ಫಾರ್ಮ್‌ನಲ್ಲಿ ಅನಧಿಕೃತವಾಗಿ ಗೃಹ ಬಳಕೆ ಹಾಗೂ ವಾಣಿಜ್ಯ ಸಿಲಿಂಡರ್ ತುಂಬುತ್ತಿದ್ದ ಮೂವರ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ.
ಕೈಲಾಸ್ ಗೋದೇರ ಬಂಧಿತ. ಈರಣ್ಣ ಹೊಸಪೇಟೆ, ಮಹಮ್ಮದ್ ಐನಾಪುರ ಪರಾರಿಯಾಗಿದ್ದಾರೆ. ಬಂಧಿತರಿಂದ 248 ಸಿಲಿಂಡರ್, 4 ರೀಫಿಲ್ಲಿಂಗ್ ಮಷಿನ್, ಎರಡು ಗೂಡ್ಸ್ ವಾಹನ ವಶಪಡಿಸಿಕೊಳ್ಳಲಾಗಿದೆ.
ಮಹಮ್ಮದ್ ಐನಾಪುರ ಅವರ ತಾರಿಹಾಳ ಜೋಡಳ್ಳಿ ರಸ್ತೆಯಲ್ಲಿರುವ ಕೋಳಿಫಾರ್ಮ್‌ನಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಪಿ ಮತ್ತು ಭಾರತ ಗ್ಯಾಸ್ ಕಂಪನಿಗಳ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ರೀಫಿಲ್ಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆಹಾರ ಇಲಾಖೆ ಅಧಿಕಾರಿ ವಿಜಯಕುಮಾರ ಪತ್ತಾರ ದೂರು ನೀಡಿದ್ದಾರೆ.