ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದು ಖಚಿತ

web3
Published on

ರಾಮದುರ್ಗ: ಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗುವುದನ್ನು ಯಾವುದೇ ದುಷ್ಟಶಕ್ತಿ ತಡೆಯಲು ಸಾಧ್ಯವಿಲ್ಲ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ತೇರ ಬಜಾರದಲ್ಲಿ ನಮೋ ಬ್ರೀಗೇಡ್-2.0 ಬಹಿರಂಗ ಸಮಾವೇಶವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಬಿಟ್ಟಿ ಭಾಗ್ಯಗಳ ಆಮಿಷ ಒಡ್ಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಶಾಸಕರೇ ಐದು ವರ್ಷಗಳ ಕಾಲ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಖುರ್ಚಿಗಾಗಿ ಸುಳ್ಳು ಹೇಳುತ್ತಾರೆ. ರಾಜ್ಯದ ಅಭಿವೃದ್ಧಿ ಇವರಿಗೆ ಬೇಕಿಲ್ಲ ಎಂದು ಆರೋಪಿಸಿದರು.

ದೇಶದ ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಮೋದಿ ನೆಲೆಸಿದ್ದಾರೆ. ಅವರು ಮಾಡಿದ ದೇಶಭಕ್ತಿ, ರಾಷ್ಟ್ರದ ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಮನೆಗಳಿಗೂ ತಿಳಿಸುವ ಉದ್ದೇಶದಿಂದ ನಮೋ ಬ್ರೀಗೇಡ್ ಕಾರ್ಯಪ್ರವೃತ್ತವಾಗಿದೆ. ಸನಾತನ ನಾಶ ಸಾಧ್ಯವಿಲ್ಲ. ಪ್ರಿಯಾಂಕ ಖರ್ಗೆ ಸನಾತನದ ಬಗ್ಗೆ ಇಲ್ಲ-ಸಲ್ಲದ ಹೇಳಿಕೆ ನೀಡಿರುವುದು ಸರಿಯಲ್ಲ. ಕಾಂಗ್ರೆಸ್ಸಿಗರು ಎಷ್ಟೇ ಪ್ರಯತ್ನ ಮಾಡಿದರೂ ಸನಾತನ ನಾಶ ಮಾಡಲು ಸಾಧ್ಯವಿಲ್ಲ. ಸನಾತನ ಸಂಸ್ಕೃತಿ ರಕ್ಷಣೆಗೆ ಮೋದೀಜಿ ಬದ್ಧರಾಗಿದ್ದಾರೆ ಎಂದರು.

ಚಕ್ರವರ್ತಿ ಸೂಲಿಬೆಲೆ ರಾಮದುರ್ಗ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸುತ್ತಿದ್ದಂತೆ, ನೂರಾರು ಯುವಕರು, ಭಾರತ ಮಾತೆಯ ಭಾವಚಿತ್ರದ ತೆರೆದ ವಾಹನದ ಮೆರವಣಿಗೆಯೊಂದಿಗೆ ಬೈಕ್ ರ‌್ಯಾಲಿಯ ಮುಖಾಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಉದ್ಯಮಿ ಸಂಜೀವ ಶೆಟ್ಟಿಸದಾವರ್ತಿ, ವರ್ಧಮಾನ ತ್ಯಾಗಿ, ನಿರಂಜನ ಸಾಲಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net