ಹಾಸನ: ರೈಲ್ವೆ ಹಳಿ ಮೇಲೆ ಮತ್ತೆ ಭೂಕುಸಿತ! ರೈಲು ಸಂಚಾರ ದಿಢೀರ್ ಸ್ಥಗಿತ

ವಿಜಯವಾಣಿ - 2024-08-16T140556.914
Published on

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ಮಾರ್ಗ ಮಂಗಳೂರಿಗೆ ತೆರಳುವ ರೈಲು ಸಂಚಾರಕ್ಕೆ ಇದೀಗ ಮತ್ತೊಮ್ಮೆ ತೊಡಕು ಉಂಟಾಗಿದೆ. ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ರೈಲಿನ ಹಳಿ ಮೇಲೆ ಗುಡ್ಡ ಕುಸಿದು, ಸಂಚಾರಕ್ಕೆ ಭಾರೀ ತೊಂದರೆಯಾಗಿತ್ತು. ಇದೀಗ ಮತ್ತೆ ಅದೇ ರೀತಿ ಭೂಕುಸಿತ ಉಂಟಾಗಿ, ರೈಲು ಸಂಚಾರ ದಿಢೀರ್ ಸ್ಥಗಿತಗೊಂಡಿದೆ.

ಹಾಸನದ ಸಕಲೇಶಪುರ ತಾಲ್ಲೂಕಿನ ಆಚಂಗಿ-ದೊಡ್ಡಸಾಗರ ಬಳಿ ಘಟನೆ ಸಂಭವಿಸಿದೆ. ಕಳೆದ ಒಂದು ವಾರದ ಹಿಂದೆಯಷ್ಟೇ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ತಕ್ಷಣವೇ ಮಣ್ಣು ತೆರವು ಕಾರ್ಯಾಚರಣೆಗೊಳಿಸಿದ ಅಧಿಕಾರಿಗಳು, ರೈಲ್ವೆ ಸಂಚಾರಕ್ಕೆ ಗ್ರೀನ್​​ ಸಿಗ್ನಲ್​ ಕೊಟ್ಟಿದ್ದರು. ಇದೀಗ ಅದೇ ಸ್ಥಳದಲ್ಲಿ ಮತ್ತೇ ಭೂಕುಸಿತವಾಗಿದ್ದು, ಮಂಗಳೂರಿನತ್ತ ಹೊರಟಿದ್ದ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು, ಕೆಲವು ಗಂಟೆಗಳಿಂದ ನಿಂತಲ್ಲೇ ನಿಂತಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಸ್ವಾತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮೀ ಹಬ್ಬ ಸೇರಿದಂತೆ ಸರಣಿ ರಜೆ ಪಡೆದವರು ತಮ್ಮ ಊರಿಗೆ ಹೋಗುವ ಆಸೆಯಿಂದ ರೈಲು ಹತ್ತಿ, ಸೀಟಿನಲ್ಲಿ ವಿಶ್ರಾಂತಿಸುತ್ತಿದ್ದರು. ಆದ್ರೆ, ಸಕಲೇಶಪುರ ಮಾರ್ಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದೆ ಎಂದು ಮಾಹಿತಿ ನೀಡಿರುವ ರೈಲ್ವೆ ಇಲಾಖೆ, ಇದೀಗ ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net