

ಬೆಂಗಳೂರು: ನಗರದ ಪ್ರತ್ಯೇಕ ಕಡೆ ಕಲ್ಯಾಣ ಮಂಟಪಗಳ ಬಳಿ ಮದುವೆಗೆ ಬಂದಿದ್ದ ಮಹಿಳೆಯರಿಂದ ದುಷ್ಕರ್ಮಿಗಳು ಚಿನ್ನದ ಸರ ದೋಚಿದ್ದಾರೆ. ಬನಶಂಕರಿ ಮತ್ತು ಬಸವನಗುಡಿ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ 6.30ರಿಂದ 7.30ರ ನಡುವೆ ನಡೆದಿದೆ. ಎರಡೂ ಕಡೆ ಒಂದೇ ಗ್ಯಾಂಗ್ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ವಯಸ್ಸು 25 ರಿಂದ 30 ವರ್ಷ ಇರಬಹುದು ಎಂದು ದೂರುದಾರರು ಹೇಳಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು ಬಂಧಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಸವನಗುಡಿ ಹತ್ತಿರದ ಪೈ ವಿಷ್ಟ ಕನ್ವೆಷನ್ ಹಾಲ್‌ನಲ್ಲಿ ನಡೆಯುತ್ತಿದ್ದ ಅಣ್ಣನ ಮಗಳ ಮದುವೆಗೆ ಸೋಮವಾರ ಬೆಳಗ್ಗೆ 6.30ರಲ್ಲಿ ರಾಜರಾಜೇಶ್ವರಿನಗರದ ಬಿಇಎಲ್ ಲೇಔಟ್‌ನ ಪದ್ಮಿನಿ ಪ್ರಕಾಶ್ ಬಂದಿದ್ದರು. ಕಲ್ಯಾಣ ಮಂಟಪದ ಬಳಿ ಕಾರಿನಿಂದ ಇಳಿದು ಬ್ಯಾಗ್ ತೆಗೆದುಕೊಳ್ಳುವಾಗ ಪದ್ಮಿನಿ ಬಳಿ ಇದ್ದ 50 ಗ್ರಾಂ ಚಿನ್ನ ಸರ ಕದ್ದು ಬೈಕ್‌ನಲ್ಲಿ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಇದಾದ ನಂತರ ಬನಶಂಕರಿ 2ನೇ ಹಂತದ ಧರ್ಮಗಿರಿ ಕಲ್ಯಾಣ ಮಂಟಪ ಸಮೀಪ ಬೆಳಗ್ಗೆ 7.30ರಲ್ಲಿ ಮತ್ತೊಂದು ಪ್ರಕರಣ ನಡೆದಿದೆ. ಜೆ.ಪಿ.ನಗರದ ಗೊಟ್ಟಿಗೆರೆ ಮುಖ್ಯರಸ್ತೆಯ ಸಾರಥಿ ನಗರದ ಲಾವಣ್ಯ (23) ಚಿನ್ನ ಕಳೆದುಕೊಂಡವರು. ಧರ್ಮಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ಸಂಬಂಧಿಕರ ಮದುವೆಗೆ ಬಂದಿದ್ದರು. ಮಗಳಿಗೆ ಬಿಸ್ಕೆಟ್ಸ್ ಕೊಡಿಸಲು ಮಂಟಪದಿಂದ ಲಾವಣ್ಯ ಹೊರಗೆ ಬಂದಾಗ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ 46 ಗ್ರಾಂ ಚಿನ್ನದ ಸರವನ್ನು ಕಳ್ಳರು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.