

ವಿರಾಜಪೇಟೆ: ಮಳೆಗಾಲ ಆರಂಭವಾಯಿತೆಂದರೆ ಕೊಡಗಿನಲ್ಲಿ ಆತಂಕದ ಛಾಯೆ ಇರುತ್ತದೆ. ದಿನ ಬಿಡದೆ ಸುರಿಯುತ್ತಿರುವ ಮಳೆ, ಜನತೆಯಲ್ಲಿ ಆತಂಕ, ಭೂ ಕುಸಿತ, ಜಳಪ್ರಳಯದ ಭೀತಿ ಸೃಷ್ಟಿಸಿದೆ. ಹಾಗಾಗಿ ಮಳೆಯಿಂದಾಗುವ ಅವಘಡಗಳಿಂದ ನಾಡಿನ ಜನತೆಯನ್ನು ಸಂರಕ್ಷಿಸುವಂತೆ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜಂ (ಓಣಂ ಸಮಿತಿ) ಇಲ್ಲಿನ ಶ್ರೀ ಮುತ್ತಪ್ಪನ್ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿತು.
ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳು ಎದುರಾಗಬಾರದು. ಮಳೆ, ಬೆಳೆ ಮತ್ತು ಪ್ರಾಣ ಹಾನಿಗಳು ಸಂಭವಿಸಬಾರದು. ನಾಡಿನ ಜನತೆಯು ಸುಭಿಕ್ಷವಾಗಿರಲೆಂದು ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜಂ ವತಿಯಿಂದ ಶ್ರೀ ಮುತ್ತಪ್ಪನ್ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮುತ್ತಪ್ಪನ್ ವೆಳ್ಳಾಟಂ ವೇಳೆ ಸಮಿತಿ ಪದಾಧಿಕಾರಿಗಳು ಪ್ರಾರ್ಥಿಸಿದರು.
ಸಮಿತಿಯ ಅಧ್ಯಕ್ಷ ಪಿ.ಜಿ. ಸುಮೇಶ್ ಮಾತನಾಡಿ, ಕೆಲ ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಪ್ರಕೃತಿ ವಿಕೋಪದ ಹಲವು ರೂಪಗಳನ್ನು ಜನತೆ ನೋಡಿದ್ದಾರೆ. ಸಾವು-ನೋವು ಸಂಭವಿಸಿದೆ. ಬೆಳೆ, ಪ್ರಾಣ ಹಾನಿ ಸಂಭವಿಸಿದೆ. ಕಾವೇರಿ ಹರಿಯುವ ನಾಡಿನಲ್ಲಿ ದುರಂತಗಳು ಎದುರಾಗಬಾರದು ಎಂದು ಸಮಿತಿ ವತಿಯಿಂದ ಮುತ್ತಪ್ಪನ್ ವೆಳ್ಳಾಟಂ ವಿಶೇಷವಾಗಿ ಪ್ರಾರ್ಥನೆ ನೆರವೇರಿಸಲಾಯಿತು ಎಂದು ತಿಳಿಸಿದರು.
ವಿಶೇಷ ಪ್ರಾರ್ಥನೆ ಬಳಿಕ ಸಮಿತಿ ವತಿಯಿಂದ ಓಣಂ ಆಚರಣೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು. ಬರುವ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 16ನೇ ವರ್ಷದ ವಿಜೃಂಭಣೆಯ ಓಣಂ ಹಬ್ಬ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಮಿತಿಯ ಪದಾಧಿಕಾರಿಗಳು, ಸದಸ್ಯರು, ದೇಗುಲ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾರು ಇದ್ದರು.