

ಕಾಸರಗೋಡು: ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿ ಮಾರುಕಟ್ಟೆಯಲ್ಲಿರುವ ಪ್ರಮುಖ ಬ್ರ್ಯಾಂಡ್‌ಗಳೊಂದಿಗೆ ಸ್ಪರ್ಧಿಸಬಹುದಾದ, ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲಾಗುತ್ತಿದೆ ಎಂದು ಸಚಿವ ವಿ.ಎನ್.ವಾಸವನ್ ಹೇಳಿದರು.
ಕಾಞಂಗಾಡಿನಲ್ಲಿ ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿ ಮತ್ತು ಪಯ್ಯನ್ನೂರು ಖಾದಿ ಕೇಂದ್ರ ಆಯೋಜಿಸಿದ್ದ ‘ಓಣಂ ಖಾದಿ ಮೇಳ 2025’ರ ಜಿಲ್ಲಾಮಟ್ಟದ ಮಾರಾಟ ಮೇಳ ಉದ್ಘಾಟಿಸಿದರು.
ಕಾಞಂಗಾಡಿನ ಹಳೇ ಬಸ್ ನಿಲ್ದಾಣದ ಸೌಭಾಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಸಿ.ಎಚ್.ಕುಞಂಬು ಶುಭಹಾರೈಸಿದರು. ಸಾಮಾಜಿಕ ಕಾರ್ಯಕರ್ತ ಎಂ.ಕೆ.ವಿನೋದ್ ಅವರಿಗೆ ಕಾಞಂಗಾಡ್ ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತಾ ಬಟ್ಟೆ ನೀಡುವ ಮೂಲಕ ಉದ್ಘಾಟಿಸಿದರು. ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ ಮತ್ತು ಮಾಜಿ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್, ನಟ ಸಂತೋಷ್ ಕಿಯಾಟ್ಟೂರ್ ಉಪಸ್ಥಿತರಿದ್ದರು.
ಪಯ್ಯನ್ನೂರು ಖಾದಿ ಕೇಂದ್ರದ ನಿರ್ದೇಶಕ ವಿ.ಶಿಬು ಸ್ವಾಗತಿಸಿದರು. ಯೋಜನಾಧಿಕಾರಿ ಪಿ.ಸುಭಾಷ್ ವಂದಿಸಿದರು.