

ಗುಂಡ್ಲುಪೇಟೆ : ತಾಲೂಕಿನಲ್ಲಿ ನೆಲೆಸಿರುವ ಮಲೆಯಾಳಿಗಳು ತಮ್ಮ ಮನೆಗಳಲ್ಲಿ ಭಾನುವಾರ ಸುಗ್ಗಿಯ ಹಬ್ಬವಾದ ಓಣಂ ಅನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಶ್ರಾವಣ ಮಾಸದಲ್ಲಿ ಕೇರಳದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬವಾದ ಓಣಂ ಅನ್ನು ತಾಲೂಕಿನಲ್ಲಿ ನೆರೆಸಿರುವ ಕೇರಳಿಗರು ಸಹಾ ಸಡಗರ ಸಂಭ್ರಮಗಳಿಂದ ಆಚರಿಸುತ್ತಾ ಬಂದಿದ್ದಾರೆ. ತಿರು ಓಣಂ ಎಂದು ಕರೆಯುವ ಈ ಹಬ್ಬವನ್ನು ಕೇರಳದಲ್ಲಿ ಈ ಬಾರಿ ಸೆ 6ರಿಂದ 15 ರವರೆಗೆ ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನೆರೆಸಿರುವ ಮಲೆಯಾಳಿಗಳು ಹತ್ತು ದಿನಗಳಿಂದ ಮನೆಗಳನ್ನು ಶುಚಿಗೊಳಿಸಿ ನಾನಾ ವಿಧದ ಹೂವುಗಳಿಂದ ಅಲಂಕರಿಸಿದ್ದರು. ಭಾನುವಾರ ಮುಂಜಾನೆ ಸ್ನಾನ ಮಾಡಿ ಶುಭ್ರವಸ್ತ್ರ ಧರಿಸಿದ ಮಹಿಳೆಯರು ತಮ್ಮ ಮನೆಗಳಲ್ಲಿ ವಿವಿಧ ವರ್ಣದ ಪುಷ್ಪಗಳಿಂದ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ನಡುವೆ ದೀಪ ಹಚ್ಚಿ ಪೂಜೆ ಸಲ್ಲಿಸಿದರು. ಪುರುಷರು ಸಾಂಪ್ರದಾಯಿಕ ಶ್ವೇತವಸ್ತ್ರ ಧರಿಸಿ ಹಬ್ಬದ ಸಡಗರ ಹೆಚ್ಚಿಸಿದರು. ಪ್ರತಿ ಮನೆಗಳಲ್ಲಿಯೂ ವಿಶೇಷ ಭಕ್ಷ್ಯ ಭೋಜನಗಳನ್ನು ತಯಾರಿಸಿ ದೇವರಿಗೆ ಅರ್ಪಿಸಿದರು. ಬಂದು ಬಾಂಧವರನ್ನು ಕರೆದು ಸಂಭ್ರಮಿಸಿದರು.