ಒನಕೆ ಓಬವ್ವನ ಆದರ್ಶ ಮೈಗೂಡಿಸಿಕೊಳ್ಳಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕರೆ

Onake Obavva Jayanti Mandya
Published on

ಮಂಡ್ಯ: ಪ್ರತಿ ಹೆಣ್ಣುಮಕ್ಕಳು ವೀರ ವನಿತೆ ಒನಕೆ ಓಬವ್ವನ ಆದರ್ಶವನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಅವರಂತೆ ಧೈರ್ಯಶಾಲಿಯಾಗಿ ಬದುಕಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕರೆ ನೀಡಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 18ನೇ ಶತಮಾನದಲ್ಲಿ ಕನ್ನಡ ನಾಡಿನ ಸ್ವಾಭಿಮಾನವನ್ನು ಎತ್ತಿಹಿಡಿದ ವೀರವನಿತೆ ಒನಕೆ ಓಬವ್ವನ ಜಯಂತಿಯನ್ನು ಇಂದು ಇಡೀ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಸರ್ಕಾರವು ನಾಡಿಗೆ ಕೊಡುಗೆ ನೀಡಿದ ಅನೇಕ ಮಹಾನೀಯರ ಜಯಂತಿ ಆಚರಿಸುತ್ತಿದ್ದು, ಇತಿಹಾಸವನ್ನು ಯಾರು ಕೂಡ ಮರೆಯಬಾರದು ಎಂಬುದು ಇದರ ಉದ್ದೇಶವಾಗಿದೆ ಎಂದರು.

ಅಂದಿನ ಕಾಲದಲ್ಲಿ ಚಿತ್ರದುರ್ಗದ ಮದಕರಿ ನಾಯಕ ಆಳ್ವಿಕೆ ನಡೆಸುತ್ತಿದ್ದ ಕೋಟೆಯನ್ನು ಹೈದರಾಲಿ ಸೈನ್ಯ ಸುತ್ತುವರೆದು ಆಕ್ರಮಣ ಮಾಡುವ ಸಂದರ್ಭದಲ್ಲಿ ವೈರಿಗಳನ್ನು ಧೈರ್ಯದಿಂದ ಮೆಟ್ಟಿನಿಂತವರು ಒನಕೆ ಓಬವ್ವ. ಈಕೆ ಮದಕರಿ ನಾಯಕನ ಕೋಟೆಯ ಕಾವಲುಗಾರನಾಗಿದ್ದ ಕಹಳೆ ಮದ್ದ ಹನುಮಪ್ಪನ ಪತ್ನಿಯಾಗಿದ್ದು, ಶತ್ರುಗಳನ್ನು ಸದೆಬಡಿಯಲು ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಡಿ ಧೈರ್ಯ ಹಾಗೂ ರಾಜ ನಿಷ್ಠೆಯನ್ನು ಮೆರೆದರು. ಓಬವ್ವ ವಿದ್ಯಾಭ್ಯಾಸವ ಅಥವಾ ಯಾವುದೇ ಹುದ್ದೆಯನ್ನು ಪಡೆದವಳಲ್ಲ. ಆದರೂ ತನ್ನ ಪತಿಯ ಕರ್ತವ್ಯವನ್ನು ತನ್ನದೆಂದು ಭಾವಿಸಿ ವಿರಾವೇಶದಿಂದ ಶತ್ರು ನಾಶ ಮಾಡಿದ ಆಕೆಯ ಸಾಧನೆಯನ್ನು ಎಲ್ಲರೂ ಮೆಚ್ಚುವಂತದ್ದು ಎಂದರು.

ಓಬವ್ವ ಅತ್ಯಂತ ನಿಷ್ಠಾವಂತ ಹೆಣ್ಣುಮಗಳಾಗಿ, ನಮ್ಮ ನಾಡಿಗೆ ಕೀರ್ತಿ ತಂದುಕೊಟ್ಟಿದ್ದಾರೆ. ಸಾಮಾನ್ಯಳಾಗಿ ಹುಟ್ಟಿ ಅಸಾಮಾನ್ಯ ಸಾಧನೆಯನ್ನು ಮಾಡಿದ ಓಬವ್ವ ನಮ್ಮ ನಾಡಿನ ಎಲ್ಲ ಹೆಣ್ಣು ಮಕ್ಕಳಿಗೂ ಸ್ಫೂರ್ತಿಯಾಗಿದ್ದಾರೆ. ಎಲ್ಲರೂ ರಾಷ್ಟ್ರವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಓಬವ್ವನಂತೆ ಧೈರ್ಯವನ್ನು ಪ್ರದರ್ಶಿಸಬೇಕು. ಪ್ರಸ್ತುತ ಕಾಲದ ಹೆಣ್ಣುಮಕ್ಕಳು ಅವರ ಮಾರ್ಗವನ್ನು ಅನುಸರಿಸುವುದರ ಜತೆಗೆ ಸಾಮಾಜಿಕ ಕೆಲಸಗಳಲ್ಲಿ ಧೈರ್ಯವಾಗಿ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ಶಾರದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಟಿ.ಬಿ.ಅನುಸೂಯ ಹೊಂಬಾಳೆ ಮಾತನಾಡಿ, ಚಿನ್ನಪ್ಪ ಹಾಗೂ ಚಿನ್ನಮ್ಮ ಎಂಬ ದಂಪತಿಗೆ ಸಾಮಾನ್ಯ ಹೆಣ್ಣು ಮಗಳಾಗಿ ಜನಿಸಿದ ಓಬವ್ವ ಇಂದು ಚರಿತ್ರೆಯಲ್ಲಿ ಹೆಸರಾಗಿದ್ದಾಳೆ. ಮದಕರಿ ನಾಯಕನ ಕಾಲಘಟ್ಟದಲ್ಲಿ ಕಹಳೆ ಕಾವಲುಗಾರನಾಗಿದ್ದ ಹನುಮಪ್ಪನ ಮಗ ಮುದ್ದ ಹನುಮಪ್ಪನ ಪತ್ನಿಯಾಗಿ ಮದಕರಿ ನಾಯಕನ ಕೋಟೆಗೆ ನುಸುಳುತ್ತಿದ್ದ ಹೈದರಾಲಿ ಸೈನ್ಯವನ್ನು ತನ್ನ ಮನೆಯಲ್ಲಿದ್ದ ಒನಕೆಯನ್ನು ಅಸ್ತ್ರವಾಗಿ ಉಪಯೋಗಿಸಿ ಶತ್ರುಗಳ ರುಂಡವನ್ನು ಚೆಂಡಾಡಿದ ಈಕೆ ತನ್ನ ಧೈರ್ಯ, ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ಹಾಗೂ ಬದ್ಧತೆಯನ್ನು ಮೆರದು ವೀರ ವನಿತೆ ಒನಕೆ ಓಬವ್ವ ಎಂದು ಹೆಸರಾಗಿದ್ದಾಳೆ ಎಂದರು.

’ಯಾರು ಹುಟ್ಟಿನಿಂದ ಮಹಾತ್ಮರಾಗಿರುವುದಿಲ್ಲ. ಯಾವ ಸಾಮಾನ್ಯ ಮನುಷ್ಯನು ಕೂಡ ಮಹಾತ್ಮರಾಗಬಹುದು. ಆದರೆ ಆ ಚೇತನಕ್ಕೆ ಒಂದು ಕಿಡಿ ತಾಗಬೇಕು. ಒಂದು ರಸ ಸೋಕಬೇಕು. ಕಿಡಿ ತಾಕಿ ರಸ ಸೋಕಿದಾಗ ಎಲ್ಲರೂ ಮಹಾತ್ಮರಾಗಬಹುದು’ ಎಂಬ ಕುವೆಂಪುರವರ ಮಾತಿನಂತೆ ಓಬವ್ವನಂತಹ ಕಿಡಿ ತಾಕಿ ಧೈರ್ಯ, ಶೌರ್ಯವೆಂಬ ರಸ ಸೋಕಿದಾಗ ಎಲ್ಲರೂ ಮಹಾತ್ಮರಾಗುವರು. ಆದರೆ ಇಂದಿನ ಹೆಣ್ಣುಮಕ್ಕಳು ಒಂದು ಜಿರಳೆಯನ್ನು ಎದುರಿಸಲು ಮನೆಯವರ ಸಹಾಯ ಪಡೆಯುತ್ತೀರಾ?. ಆದರೆ ಅಂದಿನ ಕಾಲದಲ್ಲಿಯೇ ಓಬವ್ವ ಒಬ್ಬಂಟಿಯಾಗಿ ಶತ್ರುಗಳ ವಿರುದ್ಧ ಹೋರಾಡಿ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಪ್ರತಿ ಹೆಣ್ಣು ಕೂಡ ಯಾವುದೇ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಮಹಿಳಾ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಕೃಷ್ಣೇಗೌಡ, ಸಂಘಟಕ ಕೀಲಾರ ಕೃಷ್ಣೇಗೌಡ, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ಜೈ ಕರ್ನಾಟಕ ಪರಿಷತ್‌ನ ಜಿಲ್ಲಾಧ್ಯಕ್ಷ ನಾರಾಯಣ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net