

ಮಡಿಕೇರಿ: ಹೋರಾಟ ಮನೋಭಾವದ ಸಮಯ ಪ್ರಜ್ಞೆ ಮತ್ತು ಸ್ವಯಂ ರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರ ವಹಿಸಿರುವ ವೀರರಾಣಿ ಒನಕೆ ಓಬವ್ವ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಕನ್ನಡ ನಾಡಿನ ವೀರನಾರಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಿತ್ರದುರ್ಗದ ಕೋಟೆಯ ರಕ್ಷಣೆಗೆ ಹೋರಾಡಿದ ವೀರರಾಣಿ ಒನಕೆ ಓಬವ್ವ ಅವರ ಹೋರಾಟದ ಜೀವನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಸಾಮಾನ್ಯ ಮಹಿಳೆಯಾಗಿ ಬದುಕುತ್ತಿದ್ದ ಒನಕೆ ಓಬವ್ವ ಶತ್ರುಗಳ ವಿರುದ್ಧ ಹೋರಾಡಿ ಜಯಗಳಿಸುತ್ತಾರೆ. ರಕ್ಷಣೆಗಾಗಿ ಒನಕೆ ಬಳಸುವ ಮೂಲಕ ಜಯ ಪಡೆಯುತ್ತಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ವೀರ ವನಿತೆ ಒನಕೆ ಓಬವ್ವ ಅವರು ನಾಡಿಗೆ ನೀಡಿರುವ ಕೊಡುಗೆಯಿಂದ ಇಂದಿಗೂ ಸಹ ಪ್ರಸ್ತುತರಾಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ರಾಣಿ ಅಬ್ಬಕ್ಕ ಸೇರಿದಂತೆ ಹಲವು ಮಹಿಳಾ ಹೋರಾಟಗಾರರು ತಮ್ಮ ತಮ್ಮ ಪ್ರಾಂತ್ಯದಲ್ಲಿ ಶತ್ರುಗಳ ವಿರುದ್ಧ ಹೋರಾಡಿ ಜಯಸಾಧಿಸಿದ್ದಾರೆ ಎಂದು ಆರ್.ಐಶ್ವರ್ಯ ಹೇಳಿದರು.
ಓಬವ್ವ ಸಾಹಸ ತಿಳಿದು ಅಲ್ಲಿನ ಅರಸರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ದುರ್ಗದ ಕೋಟೆಯನ್ನು ರಕ್ಷಿಸಿದ ತಾಯಿ ಒನಕೆ ಓಬವ್ವ ಎಂದು ಶ್ಲಾಘಿಸುತ್ತಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿವರಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಕೋರನ ಸರಸ್ವತಿ ಮಾತನಾಡಿ, ಭಾರತ ಸ್ವಾತಂತ್ರ್ಯಕ್ಕೂ ಮೊದಲು ಆಯಾಯ ಪ್ರಾಂತ್ಯದಲ್ಲಿ ರಾಜ ಮಹಾರಾಜರು ಇತರರು ತಮ್ಮ ವ್ಯಾಪ್ತಿಯಲ್ಲಿ ಆಡಳಿತ ಮಾಡುತ್ತಾರೆ. ತಮ್ಮ ಪ್ರಾಂತ್ಯದ ರಕ್ಷಣೆಗಾಗಿ ಸದಾ ಮುಂದಾಗಿರುತ್ತಾರೆ. ಆ ನಿಟ್ಟಿನಲ್ಲಿ ಒನಕೆ ಓಬವ್ವ ಶತ್ರುಗಳ ಸಂಹಾರ ಮಾಡಿದ್ದಾರೆ. ಸಮಯ ಪ್ರಜ್ಞೆ ಮತ್ತು ಸಂದರ್ಭೋಚಿತವಾಗಿ ಸ್ವಯಂ ರಕ್ಷಣೆ ಮಾಡಿಕೊಳ್ಳುವತ್ತ ಮುಂದಾಗಿದ್ದು ಒನಕೆ ಓಬವ್ವ ಅವರ ಛಲ ವಿಶೇಷವಾಗಿದೆ ಎಂದರು.
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೆಂಕಟ್ ನಾಯಕ್ ಮಾತನಾಡಿ, ವೀರರಾಣಿ ಒನಕೆ ಓಬವ್ವ ಅವರು ಧೈರ್ಯ ಸಾಹಸದಿಂದ ಶತ್ರುಗಳ ಸಂಹಾರಕ್ಕೆ ಮುಂದಾದರು. ಇವರ ಧೈರ್ಯ, ಸ್ಥೈರ್ಯವನ್ನು ಮೆಚ್ಚಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ನಿವೃತ್ತ ಶಿಕ್ಷಕರಾದ ಬಿ.ಸಿ.ಶಂಕರಯ್ಯ ಇತರರು ಇದ್ದರು.