ಒನಕೆ ಓಬವ್ವ ಸಾಹಸ ಯುವಜನತೆಗೆ ಪ್ರೇರಣೆ:- ಶಾಸಕ ಯಶ್ಪಾಲ್

udp-11-yashpal
Published on

ಉಡುಪಿ: ಒನಕೆ ಓಬವ್ವ ಅವರ  ಶೌರ್ಯ, ಸಾಹಸ ಯುವಜನತೆಗೆ ಪ್ರೇರಣೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.

 ಶನಿವಾರ ನಗರದ ಆದಿಉಡುಪಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ವೀರರಾಣಿ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಒನಕೆ ಓಬವ್ವ ಒಬ್ಬ 18 ನೇ ಶತಮಾನದ ವೀರ ವನಿತೆ ಮಹಿಳೆ. ಹೈದರಾಲಿಯ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದಾಗ, ಎದೆಗುಂದದೆ ಶತ್ರು ಸೈನ್ಯವನ್ನು ತನ್ನ ಒನಕೆಯಿಂದಲೆ ಮಟ್ಟ ಹಾಕಿದ್ದಳು. ಯುವ ಪೀಳಿಗೆ ಮಹನಿಯರ ಜಯಂತಿಯಲ್ಲಿ ಭಾಗವಹಿಸುವ ಮೂಲಕ  ಸನಾತನ ಸಂಸ್ಕೃತಿ, ಆಚಾರ ವಿಚಾರಗಳನ್ನು ಪಾಲಿಸಬೇಕು. ದೇಶದ ರಕ್ಷಣೆಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಮಮತ ದೇವಿ ಜಿ.ಎಸ್. ಮಾತನಾಡಿ, ಶಸ್ತ್ರ್ತ್ರಗಳನ್ನು ಬಳಸದೇ, ರಣರಂಗ ಪ್ರವೇಶಿಸಿದೆ ಅಸಂಖ್ಯಾತ ಶತ್ರು ಸೈನಿಕರನ್ನು ಕೇವಲ ಒಂದು ಒನಕೆಯಿಂದ ಸಂಹರಿಸಿ, ಇತಿಹಾಸ ಪ್ರಸಿದ್ಧವಾದ, ವೀರ ನಾಡೆನಿಸಿದ ಚಿತ್ರದುರ್ಗದ ಉಕ್ಕಿನ ಕೋಟೆಯನ್ನು ಶತ್ರುಗಳ ಕುತಂತ್ರ ಆಕ್ರಮಣದಿಂದ ರಕ್ಷಿಸಿದ ಧೀಮಂತ ಮಹಿಳೆ ಒನಕೆ ಓಬವ್ವ ಎಂದರು .

 ಸಾಹಿತಿ ಡಾ. ಗಣನಾಥ ಎಕ್ಕಾರು ಉಪನ್ಯಾಸ ನೀಡಿ, ದೇಶದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಗಮನಿಸಿದಾಗ ಪುರುಷರಷ್ಟೇ   ಹೆಣ್ಣು ಮಕ್ಕಳು ಕೂಡ ಪ್ರಭಾವಶಾಲಿಗಳಾಗಿದ್ದು, ಅವರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ಹಾಗೂ ಶಕ್ತಿ ತುಂಬುವ, ಅವರನ್ನು ಗೌರವಿಸುವ ಸಂದೇಶ ಒನಕೆ ಓಬವ್ವ ಅವರ ಜೀವನದಲ್ಲಿ ಕಾಣಬಹುದಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಆದಿ ಉಡುಪಿ ಶಾಲಾ ಸಂಸ್ಥೆಯ ಚಂದ್ರಶೇಖರ್ ಹೆಬ್ಬಾರ್ ಉಪಸ್ಥಿತರಿದ್ದರು.
ಕಾರ್ಕಳದ ಅಮಿತ ಮತ್ತು ತಂಡದವರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಶಶಿಧರ್ ನಿರೂಪಿಸಿ, ಆದಿಉಡುಪಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net