

ಚಿಕ್ಕೋಡಿ: ಸಾಯಿ ಸೌಹಾರ್ದ ಸಹಕಾರ ಸಂಘ ಠೇವು ಸಂಗ್ರಹ, ಸಾಲ ವಿತರಣೆಗೆ ಸೀಮಿತವಾಗದೆ ಸರ್ಕಾರಿ ಸೇವೆ ನೀಡಲು ಪ್ರತಿ ಶಾಖೆಯಲ್ಲೂ ಸಾಮಾನ್ಯ ಸೇವಾ ಕೇಂದ್ರ ಪ್ರಾರಂಭಿಸಲು ನಿರ್ಧರಿಸಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು.
ಪಟ್ಟಣದ ಸಹಕಾರ ಸಂಘದ ಎಂ.ಕೆ.ಕವಟಗಿಮಠ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 12ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಾಯಿ ಸಂಘದ 30 ಶಾಖೆಗಳು ಪ್ರಗತಿಪಥದಲ್ಲಿದ್ದು, ಜಿಲ್ಲೆಯ ವಿವಿಧೆಡೆ ಶಾಖೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸದಸ್ಯರ ಹಾಗೂ ಸಿಬ್ಬಂದಿ ಮಕ್ಕಳಿಗೆ ಸಹಾಯಧನ, ಪ್ರತಿಭಾ ಪುರಸ್ಕಾರ, ಗ್ರಾಹಕ ಸದಸ್ಯರು ಮತ್ತು ಸಿಬ್ಬಂದಿಗೆ ವಿಮೆ ಸೌಲಭ್ಯ, ಸದಸ್ಯರಿಗೆ ಕೆಎಲ್‌ಇ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಸಾಮಾಜಿಕ ಸೇವೆ ಮಾಡುತ್ತಿದೆ ಎಂದರು.
ಆಡಳಿತ ಮಂಡಳಿ, ಸದಸ್ಯರ ಸಹಕಾರ ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆ ಹಾಗೂ ಗ್ರಾಹಕರ ವಿಶ್ವಾಸದಿಂದ ಕಳೆದ ಆರ್ಥಿಕ ವರ್ಷದಲ್ಲಿ 90.55 ಲಕ್ಷ ರೂ. ಲಾಭಗಳಿಸಿದೆ. 5,922 ಸದಸ್ಯರು 94 ಲಕ್ಷ ರೂ. ಷೇರು ಬಂಡವಾಳ, 100.96 ಕೋಟಿ ರೂ. ಠೇವಣಿ ಹೊಂದಿದ್ದು, ಸಾಲ ಮರುಪಾವತಿಯಲ್ಲಿ ಶೇ.98ರಷ್ಟು ಸಾಧನೆ ಮಾಡಿದೆ. ಸಾಯಿ ಸಹಕಾರಿ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಚಿಕ್ಕೋಡಿ ನಂಬರ್ 1 ಶಾಖೆ ವಿಸ್ತರಣೆ ಮಾಡಿ ಗ್ರಾಹಕರಿಗೆ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಸಹಕಾರಿ ಸಿಬ್ಬಂದಿಗೆ ಆರೋಗ್ಯ ಸೇವೆ, ಇಎಸ್‌ಐ ಸೌಲಭ್ಯ ನೀಡುವ ಉದ್ದೇಶವಿದೆ ಎಂದರು.
ಚಿಂಚಣಿ ಸಿದ್ಧಪ್ರಭು ಸಂಸ್ಥಾನಮಠದ ಉತ್ತರಾಧಿಕಾರಿ ಶಿವಪ್ರಸಾದ ದೇವರು ಮಾತನಾಡಿ, ಸಾಯಿ ಸಹಕಾರಿಯು ಅತ್ಯಲ್ಪ ಅವಧಿಯಲ್ಲಿ ನೊಂದವರಿಗೆ ಆರ್ಥಿಕವಾಗಿ ಆಸರೆಯಾಗಿ ನಿಂತಿದೆ. ಇದರ ಸೇವೆ ಇನ್ನಷ್ಟು ವಿಸ್ತರಣೆಯಾಗಲಿ ಎಂದು ಆಶಿಸಿದರು.
ಸಾಮಾಜಿಕ ಕ್ಷೇತ್ರದಲ್ಲಿ ಆನಂದ ಮಾಳಿ, ಶೈಕ್ಷಣಿಕ ಕ್ಷೇತ್ರದಲ್ಲಿ ಎಸ್.ವೈ.ದೇಶಪಾಂಡೆ ಹಾಗೂ ಕೃಷಿ ಕ್ಷೇತ್ರದಲ್ಲಿ ರಾಚಪ್ಪ ಮಾಳಿ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಧಾನ ವ್ಯವಸ್ಥಾಪಕ ಸತೀಶ ಪಾಟೀಲ ವಾರ್ಷಿಕ ವರದಿ ಓದಿ ಅನುಮೋದನೆ ಪಡೆದರು. ರಮೇಶ ಕುಡತರಕರ, ಸಂಜಯ ಗಿಡವರ, ಲೋಕಪ್ಪ ದುಂಬಾಳಿ, ಪ್ರವೀಣ ಕಾಂಬಳೆ, ಯರಿಸ್ವಾಮಿಗೌಡ ಇಟಗೌನಿ, ಶಿವಜಾತ ಮಿರ್ಜೆ, ರಾಜಕುಮಾರ ಹಿರೇಮಠ, ಮನೋಜಕುಮಾರ ಸಮ್ಮತಶೆಟ್ಟಿ, ಘೇವರಚಂದ ಶಹಾ, ಡಾ.ಮನೋಹರ ಚಾವಲಾ, ಮಹಾಂತೇಶ ಕವಲಾಪೂರೆ, ಹೇಮಂತ ಹಂಪಣ್ಣವರ, ಸಂಜಯ ಶಿಂತ್ರೆ, ರವೀಂದ್ರ ಕರಾಡಕರ, ಸಿ.ಎ.ಕಿರಣ ಹಿರೇಮಠ ಹಾಗೂ ಇತರರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಷಡಕ್ಷರಿ ಮೂಗೇರಿ ಸ್ವಾಗತಿಸಿದರು. ರಾಜು ರೋಖಡೆ ನಿರೂಪಿಸಿ, ವಂದಿಸಿದರು.