

ಬೆಳಗಾವಿ: ಸಹ ಪ್ರಯಾಣಿಕರ ಸೋಗಿನಲ್ಲಿ ಬಂದು ರೈಲಿನಲ್ಲಿ ದರೋಡೆ ಮಾಡುತ್ತಿದ್ದ ಚಾಕ್‌ಲೇಟ್ ಗ್ಯಾಂಗ್‌ಗೆ ಗೋವಾ ಪೊಲೀಸರು ಜೈಲಿನ ದಾರಿ ತೋರಿಸಿದ್ದು, ಬುಧವಾರ ಅರೆಸ್ಟ್ ಮಾಡಿದ್ದಾರೆ.
ಬಿಹಾರ ಮೂಲದ ಸರ್ತಾಜ್ (29), ಚಂದನ್ ಕುಮಾರ್ (23) ಹಾಗೂ ದಾರಾ ಕುಮಾರ್ (29) ಬಂಧಿತರು. ಬೆೆಳಗಾವಿ-ಗೋವಾ ಮಾರ್ಗದ ರೈಲಿನಲ್ಲಿ ಸಹ ಪ್ರಯಾಣಿಕರಂತೆ ಕಾಣಿಸಿಕೊಂಡು ಪ್ರಯಾಣಿಕರಿಗೆ ಮತ್ತು ಬರುವ ಚಾಕ್‌ಲೇಟ್ ನೀಡಿ ಹಣ, ಮೊಬೈಲ್ ಇನ್ನಿತರ ವಸ್ತು ದೋಚುತ್ತಿದ್ದರು.
ರೈಲಿನಲ್ಲಿ ಪ್ರಯಾಣಿಸುವವರನ್ನೇ ಟಾರ್ಗೆಟ್ ಮಾಡಿ ಸೆ.13ರಂದು ಗೋವಾ-ಬೆಳಗಾವಿ ಮಾರ್ಗದಲ್ಲಿ ಕೈಚಳಕ ತೋರಿದ್ದ ಗ್ಯಾಂಗ್ ಮಧ್ಯಪ್ರದೇಶ ಮೂಲದ ಎಂಟು ಜನ ಪ್ರಯಾಣಿಕರಿಗೆ ಮತ್ತು ಬರುವ ಚಾಕ್‌ಲೇಟ್ ನೀಡಿ ಹಣ, ಮೊಬೈಲ್ ದೋಚಿದ್ದರು. ಚಾಕ್‌ಲೇಟ್ ತಿಂದು ಅಸ್ವಸ್ಥಗೊಂಡ ಪ್ರಯಾಣಿಕರನ್ನು ಬಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚೇತರಿಸಿಕೊಂಡ ಅವರು ಊರಿಗೆ ಮರಳಿದ್ದರು. ಈ ಸಂಬಂಧ ಗೋವಾ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಒಂದೇ ರೈಲಿನಲ್ಲಿ ನಿರಂತರ ಓಡಾಟ: ಒಂದೇ ರೈಲಿನಲ್ಲಿ ನಿರಂತರವಾಗಿ ಓಡಾಡುತ್ತಿದ್ದ ಚಾಕ್‌ಲೇಟ್ ಗ್ಯಾಂಗ್ ಕಂಡು ಸಂಶಯಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯ ಗೊತ್ತಾಗಿದೆ. ಚಾಕ್‌ಲೇಟ್‌ನಲ್ಲಿ ಡ್ರಗ್ಸ್ ಮತ್ತು ನಿದ್ದೆ ಬರುವ ಮಾತ್ರೆ ಪುಡಿ ಮಾಡಿ ಬೆರಸಿ ಇಟ್ಟುಕೊಂಡಿದ್ದೂ ಗೊತ್ತಾಗಿದೆ.
ಅದೇ ಮಾದರಿಯ ಆದರೆ ಮತ್ತೇರಿಸದ ಚಾಕ್‌ಲೇಟ್ ತಾವೂ ತಿನ್ನುತ್ತಿದ್ದ ಖದೀಮರು, ಪ್ರಯಾಣಿಕರಿಗೆ ಮತ್ತು ಬರುವ ಚಾಕ್‌ಲೇಟ್ ತಿನ್ನಲು ಕೊಡುತ್ತಿದ್ದರು. ಪ್ರಯಾಣಿಕರು ಮೂರ್ಚೆ ಹೋದ ತಕ್ಷಣ ಅವರ ಬಳಿ ಇದ್ದ ಹಣ, ಮೊಬೈಲ್, ಒಡವೆ ದೋಚಿ ಪರಾರಿಯಾಗುತ್ತಿದ್ದರು.