ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

On-the-spot solutions to people's problems
Published on

ನಾಪೋಕ್ಲು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಜನತಾ ದರ್ಶನ ಕಾರ್ಯಕ್ರಮ ಪ್ರತಿ ತಿಂಗಳು ಕೂಡ ಜಿಲ್ಲೆಯ ಒಂದೊಂದು ಭಾಗದಲ್ಲಿ ಆಯೋಜಿಸುವ ಮೂಲಕ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳನ್ನು ಅವರ ಬಳಿಗೇ ತೆರಳಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹೇಳಿದರು. ನಾಪೋಕ್ಲುವಿನ ಚೆರಿಯಪರಂಬು ಶಾದಿ ಮಹಲ್ ಸಭಾಂಗಣದಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರ ಬಳಿಗೆ ಸರ್ಕಾರ ಹೋಗಬೇಕು. ಅಧಿಕಾರಿಗಳು ಖುದ್ದಾಗಿ ಜನರ ಸಮಸ್ಯೆ ಆಲಿಸಬೇಕು. ಸ್ಥಳೀಯವಾಗಿ ಇರುವ ಸಮಸ್ಯೆಗಳು ಜಿಲ್ಲಾಮಟ್ಟದಲ್ಲಿ ಪರಿಹಾರ ಆಗಬೇಕು. ಎಲ್ಲಾ ಸಮಸ್ಯೆಗಳಿಗೂ ಆದಷ್ಟು ಸ್ಥಳದಲ್ಲೇ ಪರಿಹಾರ ಸಿಗಬೇಕು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾದರ್ಶನ ಕಾರ್ಯಕ್ರಮ ಆರಂಭಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ನಡೆಯಲಿದೆ. ಕೊಡಗಿನಲ್ಲಿ ಮುಂದಿನ ಜನತಾ ದರ್ಶನ ನಡೆಯುವುದಕ್ಕೆ ೧೫ ದಿನಗಳ ಮುಂಚಿತವಾಗಿಯೇ ವ್ಯಾಪಕ ಪ್ರಚಾರ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಕೊಡಗು ವಿದ್ಯಾವಂತರು ಮತ್ತು ವಿಚಾರವಂತರ ಜಿಲ್ಲೆಯಾಗಿದ್ದು, ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿಗೆ ನೇರವಾಗಿ ತೆರಳಿ ಪರಿಹರಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿಯೇ ಜನತಾದರ್ಶನದಲ್ಲಿ ಅರ್ಜಿಗಳ ಸಂಖ್ಯೆ ಕಡಿಮೆ ಇದೆ. ಅರಣ್ಯ ಮತ್ತು ಕಂದಾಯ ಇಲಾಖೆ ಸಮಸ್ಯೆ ಕೊಡಗಿನಲ್ಲಿ ಹೆಚ್ಚು ಇದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಚುನಾವಣೆಗೂ ಮೊದಲೇ ಘೋಷಣೆ ಆಗಿದ್ದ ೫ ಜನಪರ ಗ್ಯಾರಂಟಿ ಪೈಕಿ ೪ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಇನ್ನುಳಿದ ಒಂದು ಗ್ಯಾರಂಟಿಯನ್ನು ಡಿಸೆಂಬರ್ ಅಂತ್ಯಕ್ಕೆ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಫಲಾನುಭವಿಗಳಿಗೆ ತಲುಪಿರುವ ಗ್ಯಾರಂಟಿಗಳಿಗೆ ಯಾವುದೇ ಮಧ್ಯವರ್ತಿಗಳು ಅಡ್ಡಿಯಾಗಿಲ್ಲ.

ಶಕ್ತಿ ಯೋಜನೆ ಅಡಿಯಲ್ಲಿ ಕೊಡಗಿನ ೫೫ ಲಕ್ಷ ಮಹಿಳೆಯರು ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಿರುಗಾಡಿದ್ದಾರೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ೬.೬೫ ಕೋಟಿ ಕೊಡಗಿಂದ ವಿದ್ಯುತ್ ಬಿಲ್ ಕಟ್ಟಲಾಗಿದೆ. ೧,೧೬,೪೨೬ ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ತಲಾ ೨ ಸಾವಿರ ರೂ. ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ೧೦೦ ದಿನಗಳಲ್ಲಿ ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಜನಸಾಮಾನ್ಯರು, ಬಡವರು, ಶೋಷಿತರ ಸರ್ಕಾರ ಇದಾಗಿದ್ದು, ಬದ್ಧತೆಯಿಂದ ಕೆಲಸ ಮಾಡಲಾಗುತ್ತಿದೆ. ಇನ್ನು ಮುಂದೆ ಪ್ರತಿ ತಿಂಗಳೂ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ. ಚೆರಿಯಪರಂಬು ನಿವಾಸಿಗಳ ಬಹುದಿನದ ಬೇಡಿಕೆಯಾಗಿದ್ದ ರಸ್ತೆಗಳ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಕಾವೇರಿ ನದಿಗೆ ತ್ಯಾಜ್ಯ ಸೇರುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗುವುದು. ಸಿದ್ದಾಪುರ, ಮಾಲ್ದಾರೆ ಭಾಗದಲ್ಲಿ ಘನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಹುಡುಕಲಾಗಿದೆ. ಇದೇ ರೀತಿಯಲ್ಲಿ ಕಾವೇರಿ ನದಿಯ ತ್ಯಾಜ್ಯ ಸಮಸ್ಯೆಯನ್ನೂ ಬಗೆಹರಿಸಲಾಗುವುದು. ಸರ್ಕಾರ ಮತ್ತು ಅಧಿಕಾರಿಗಳು ಜನರ ಬಳಿಗೆ ತೆರಳಬೇಕು ಎನ್ನುವ ಉದ್ದೇಶಕ್ಕೆ ಗ್ರಾಮೀಣ ಪ್ರದೇಶದಲ್ಲಿ ಮೊದಲ ಜನತಾ ದರ್ಶನ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ವಿ. ಪ್ರಸಾದ್ ಕೂಡ ಕಾವೇರಿ ನದಿಯಲ್ಲಿ ತ್ಯಾಜ್ಯ ಚೆಲ್ಲುವುದಕ್ಕೆ ಕಡಿವಾಣ ಹಾಕವುದನ್ನು ತಡೆಯಲು ಯೋಜನೆ ರೂಪಿಸಲಾಗುವುದು. ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಎಲ್ಲಾ ಇಲಾಖೆಗಳು ಜಿಲ್ಲೆಯ ಒಂದೇ ಜಾಗದಲ್ಲಿ ಒಟ್ಟಿಗೆ ಸಿಗಬೇಕು. ಜನಸಾಮಾನ್ಯರ ಸಮಸ್ಯೆ ಬಗೆಹರಿಯಬೇಕು ಎನ್ನುವ ಸಿಎಂ ಆಶಯದಂತೆ ಜನತಾ ದರ್ಶನ ಕಾರ್ಯಕ್ರಮ ಯಶಸ್ವ್ವಿಯಾಗಿ ನಡೆಸಲಾಗುತ್ತಿದೆ ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಎಸ್.ಪಿ. ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಜಿ.ಪಂ. ಸಿಇಒ ವರ್ಣಿತ್ ನೇಗಿ, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net