

ಬಳ್ಳಾರಿ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಲೆದಾಡಿ ಪರಿಹಾರ ಸಿಗದೆ ತ್ವರಿತ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ರೂಪಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಅಹವಾಲುಗಳಿದ್ದಲ್ಲಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಳ್ಳಾರಿ ತಾಲೂಕುಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ತಿಂಗಳಿಗೆ ಎರಡು ಬಾರಿ ಜನ ಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿಕೊಳ್ಳುತ್ತಿದ್ದು, ತಾಲೂಕುಮಟ್ಟದಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ನೀಡಲಾಗುತ್ತಿದೆ. ಸಮಸ್ಯೆಗಳಿರುವ ಸಾರ್ವಜನಿಕರು ಜನಸ್ಪಂದನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿ, ಅದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ತಾಲೂಕಿನ ಬೀಸನಹಳ್ಳಿ ಗ್ರಾಮದ ನಿವಾಸಿ ಹುಲಿಗೆಮ್ಮ ‘ನಾನು ವೃದ್ಧೆ ಸ್ವಾಮಿ, ಸರ್ಕಾರ ನೀಡುವ ಪಿಂಚಣಿಯಿಂದ ಜೀವನ ನಡೆಸುತ್ತಿದ್ದೆ, ಈ ಮೊದಲು 1200 ರೂ. ಪಿಂಚಣಿ ಕೊಡುತ್ತಿದ್ದರು. ಆಮೇಲೆ 600 ರೂ. ಬರ್ತಿತ್ತು. ಈಗ ಆರು ತಿಂಗಳಿನಿಂದ ಯಾವ ಪಿಂಚಣಿ ಬರುತ್ತಿಲ್ಲ. ಜಿಲ್ಲಾಧಿಕಾರಿ ಸಾಹೇಬ್ರು ಅದರ ಬಗ್ಗೆ ವಿಚಾರಿಸಿ ಪರಿಹಾರ ನೀಡಬೇಕು ಎಂದು ಡಿಸಿಗೆ ಮನವಿ ಮಾಡಿದರು.
ಅಹವಾಲು ಸ್ವೀಕಾರ ಮಾಡಲು 15 ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾಸ್ಕ್ ವಿತರಿಸಿ ಮುಂಜಾಗ್ರತೆ ಕ್ರಮ ವಹಿಸಲಾಗಿತ್ತು.
ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್, ತಹಸೀಲ್ದಾರ್ ಗುರುರಾಜ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕುಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.