ನಾನು ಕೂಡ ತಂದೆಯ ಮಗಳು: ಸಂಸದ ಪ್ರತಾಪ್​ ಸಿಂಹರಿಗೆ ಭಾವನಾತ್ಮಕ ಪತ್ರ ಬರೆದ ಕೊಡಗಿನ ಬಾಲಕಿ

Kodagu Girl
Published on

ಕೊಡಗು: ಸಂಸದ ಪ್ರತಾಪ್ ಸಿಂಹರಿಗೆ ಕೊಡಗಿನ ಪುಟ್ಟ ಬಾಲಕಿಯೊಬ್ಬಳು ಭಾವನಾತ್ಮಕ ಬರಹಗಳನ್ನೊಳಗೊಂಡ ಬಹಿರಂಗ ಪತ್ರವೊಂದು ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೊಂದು ಸಾಮಾಜಿಕ ಕಳಕಳಿಯ ಪತ್ರವಾಗಿದ್ದು, ವೀರಾಜಪೇಟೆ ತಾಲ್ಲೂಕಿನ ಬಾಳೆಲೆ‌ ನಿವಾಸಿ ಅರ್ಜುನ್ ಬೋಪಣ್ಣ ಪುತ್ರಿ ರೆಲಿಕಾ ಪ್ರತಾಪ್​ ಸಿಂಹರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾಳೆ.

ಕೊಡಗು ಶೇ. 18 ಪ್ರವಾಸೋದ್ಯಮವನ್ನು ಅವಲಂಬಿಸಿದೆ ಎಂದು ಪ್ರತಾಪ್​ ಸಿಂಹ ನೀಡಿರುವ ಹೇಳಿಕೆಗೆ ಭಾವನಾತ್ಮಕವಾಗಿ ಉತ್ತರಿಸಿರುವ ರೆಲಿಕಾ, ನೀವು ಒಬ್ಬ ಮಗಳ ತಂದೆ. ನಾನು ಕೂಡ ತಂದೆಯ ಮಗಳು. ಆದರೆ, ನಿಮ್ಮ ಯೋಜನೆಗಳು ನಮ್ಮ ಜೀವಸಂಕುಲವನ್ನು ಕೊಲ್ಲುತ್ತಿವೆ. ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತೊಂದು ರೆಸಾರ್ಟ್ ಆರಂಭಕ್ಕೆ ದಾರಿಯಾಗಿದೆ ಎಂದು ರೆಲಿಕಾ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾಳೆ.

ರೈಲ್ವೆ ಯೋಜನೆ ಕೇರಳದವರಿಗೆ ರೆಸ್ಟೋರೆಂಟ್ ತೆರೆಯಲು ಅವಕಾಶ ಕೊಡುತ್ತದೆ. ಹೊರಗಿನವರು ಬಂದು ಇಲ್ಲಿ ಉದ್ಯೋಗ ಕಂಡುಕೊಳ್ಳುತ್ತಾರೆ. ಅವರು ಇಲ್ಲಿ‌ನ ಪರಿಸರವನ್ನು ಕೊಲ್ಲುತ್ತಾರೆ. ಜಿಲ್ಲೆಯ ಶೇ. 82 ಜನ ಕೃಷಿ ಅವಲಂಬಿಸಿದ್ದಾರೆ. ಅವರು ಇಲ್ಲಿನ ಪರಿಸರವನ್ನು ರಕ್ಷಿಸುತ್ತಿದ್ದಾರೆ. ಕಾಫಿ, ಕರಿಮೆಣಸು ಹಾಗೂ ಭತ್ತಕ್ಕೆ ಬೆಂಬಲ‌ ಬೆಲೆ ಕೊಡುವ ಮೂಲಕ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದಾಳೆ.

ನಾನು ಹಾಗೂ ನಿಮ್ಮ‌ ಮಗಳು ಇನ್ನೂ ಕಾವೇರಿ ನೀರು ಕುಡಿಯುತ್ತಿದ್ದೇವೆ. ಕೊಡಗಿನ ಪರಿಸರಕ್ಕೆ ನೀವು ಧಕ್ಕೆ ಮಾಡುವುದಿಲ್ಲವೆಂಬ ಭರವಸೆ ಇದೆ. ಒಂದು ವೇಳೆ ಹಾಗಾಗದಿದ್ದಲ್ಲಿ ಮುಂದೆ ನಾವು ಕಣ್ಮರೆಯಾಗುತ್ತೇವೆ. ನಿಮ್ಮ ಮಗಳು ಕಣ್ಮರೆಯಾದ ಕೊಡಗು ಮತ್ತು ಕೊಡವರು ಎಂಬ ಲೇಖನ ಬರೆಯುತ್ತಾರೆ ಎಂದು ರೆಲಿಕಾ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.

ಸಂಸದರ ಪ್ರತಿಕ್ರಿಯೆ

ಬಾಲಕಿಯ ಪ್ರಶ್ನೆಗಳಿಗೆ ಫೇಸ್​ಬುಕ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರತಾಪ್​ ಸಿಂಹ ನೀನು ಭಾರತದ ಭವಿಷ್ಯ. ನಿನ್ನ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ. ಅದಕ್ಕೆ ಒಂದೆರೆಡು ದಿನ ಕಾಲಾವಕಾಶ ಬೇಕು. ಸಂಸತ್ ಅಧಿವೇಶನದಲ್ಲಿ ಬಿಜಿಯಾಗಿದ್ದೇನೆ. ಎರಡು ದಿನದಲ್ಲಿ ಬರವಣಿಗೆ ಅಥವಾ ಫೇಸ್​ಬುಕ್​ ಲೈವ್‌ನಲ್ಲಿ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net