ಹೆದ್ದಾರಿಯಲ್ಲಿ ಹುಲಿ ದರ್ಶನ, ಜನರಿಗೆ ಆತಂಕ

Tiger-Web
Published on

ಖಾನಾಪುರ: ತಾಲೂಕಿನ ಕಣಕುಂಬಿ ಅರಣ್ಯ ಪ್ರದೇಶದ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯ ಪಾರವಾಡ, ಬೇಟಣೆ, ಪಾರವಾಡ, ಗೌಳಿ ವಾಡಾ ಗ್ರಾಮಗಳ ಬಳಿ ಕಳೆದ ಮೂರ‌್ನಾಲ್ಕು ದಿನಗಳಿಂದ ಹುಲಿ ಸಂಚರಿಸುತ್ತಿರುವುದಾಗಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಗುರುವಾರ ಮಧ್ಯಾಹ್ನ ಪಾರವಾಡ ಕ್ರಾಸ್ ಬಳಿ ಸಾಗುತ್ತಿದ್ದ ಕಾಲಮನಿ ಗ್ರಾಮಸ್ಥರಿಗೆ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಹುಲಿ ಸಂಚರಿಸುತ್ತಿರುವುದು ಗೋಚರಿಸಿದೆ. ಇದನ್ನು ಅವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಹಾಡುಹಗಲೇ ಈ ಭಾಗದಲ್ಲಿ ಹುಲಿ ಸಂಚರಿಸುತ್ತಿರುವುದರಿಂದ ಕಣಕುಂಬಿ ಅರಣ್ಯದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಪಾರವಾಡ ಗ್ರಾಮದ ಬಳಿ ಹುಲಿ ಆಗಮಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಇಲಾಖೆಯಿಂದ ಕೆಲವೆಡೆ ಟ್ರ್ಯಾಪ್ ಕ್ಯಾಮರಾ ಅಳವಡಿಸಲಾಗಿದೆ. ಜನರು ಮುನ್ನೆಚ್ಚರಿಕೆ ಕ್ರಮವಾಗಿ ಒಬ್ಬರೇ ಅರಣ್ಯದೊಳಗೆ ಸಂಚರಿಸದಂತೆ ಮತ್ತು ತಮ್ಮ ಜಾನುವಾರುಗಳನ್ನು ಅರಣ್ಯದೊಳಗೆ ಮೇಯಲು ಬಿಡದಂತೆ ಪಾರವಾಡ, ಬೇಟನೆ ಮತ್ತು ಪಾರವಾಡ ಗೌಳಿವಾಡಾ ಗ್ರಾಮಸ್ಥರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net