

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸ್ವರ್ಣ ಗದ್ದುಗೆ, ರಜತ ರಥ, ಸ್ವರ್ಣಮುಖ, ಉಚ್ಚಂಗಿ ಚಿನ್ನದ ಪಾದ ಪೀಠ ತಯಾರಿಕೆ ಬಹುತೇಕ ಪೂರ್ಣಗೊಂಡಿದ್ದು, ಫೆ.9ರಂದು ಮಧ್ಯಾಹ್ನ ಉಡುಪಿಯಿಂದ ಕಾಪು ದಂಡತೀರ್ಥ ಮಠಕ್ಕೆ ತಂದು, ಅಲ್ಲಿಂದ ಹೊಸ ಮಾರಿಗುಡಿಯವರೆಗೆ ಬೃಹತ್ ಶೋಭಾಯಾತ್ರೆಯಲ್ಲಿ ಪುರಪ್ರವೇಶ ಮಾಡಲಾಗುವುದು ಎಂದು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ ಹೇಳಿದರು.
ಸಂಪೂರ್ಣ ಶಿಲಾಮಯವಾಗಿ ನಿರ್ಮಾಣಗೊಂಡು ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ. 9ರಂದು ನಡೆಯಲಿರುವ ಸ್ವರ್ಣ ಗದ್ದುಗೆ, ರಜತ ರಥ, ಸ್ವರ್ಣಮುಖ, ಉಚ್ಚಂಗಿ ಚಿನ್ನದ ಪಾದ ಪೀಠ ಇತ್ಯಾದಿ ಆಭರಣಗಳ ಪುರಪ್ರವೇಶ ಶೋಭಾಯಾತ್ರೆ ಪೂರ್ವಭಾವಿಯಾಗಿ ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ನೇತೃತ್ವದಲ್ಲಿ ಶನಿವಾರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ದೇವಸ್ಥಾನ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಕೆ.ರವಿಕಿರಣ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಬಾಲಾಜಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ, ಸ್ವರ್ಣ ಸಮರ್ಪಣಾ ಸಮಿತಿ ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ನವದುರ್ಗಾ ಲೇಖನ ಯಜ್ಞ ಸಮಿತಿ ಕೋಶಾಧಿಕಾರಿ ಕೆ.ವಿಶ್ವನಾಥ್, ಬ್ರಹ್ಮಕಲಶೋತ್ಸವ ಮಹಿಳಾ ಸಮಿತಿ ಪ್ರಧಾನ ಸಂಚಾಲಕಿ ಬೀನಾ ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷರಾದ ಶಿಲ್ಪಾ ಜಿ.ಸುವರ್ಣ, ಅನುರಾಧಾ ಎಂ.ಶೆಟ್ಟಿ, ಜಯಲಕ್ಷ್ಮೀ ಎಸ್.ಶೆಟ್ಟಿ, ಶೋಭಾ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಅಧ್ಯಕ್ಷ ರವಿ ಸುಂದರ್ ಶೆಟ್ಟಿ ಮತ್ತು ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರೆಲ್ಲರ ಸಹಕಾರದೊಂದಿಗೆ ದಾನಿಗಳನ್ನು ಮತ್ತು ಸ್ವರ್ಣಾಭರಣಗಳನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಶಂಖ, ಜಾಗಟೆ ಸಹಿತ ಸಿದ್ಧತೆಗಳೊಂದಿಗೆ ಶಿಸ್ತುಬದ್ಧ ಮೆರವಣಿಗೆ, ಶೋಭಾಯಾತ್ರೆ ಮೂಲಕ ಪುರಪ್ರವೇಶಕ್ಕೆ ನಿರ್ಧರಿಸಲಾಯಿತು.