6ರಂದು ವಿ.ಶ್ರೀನಿವಾಸ ಪ್ರಸಾದ್ ವಿಚಾರ ಮಂಥನ

V.SRINIVASAPRASAD
Published on

ಮೈಸೂರು: ನಗರದ ಮಾನಸಗಂಗೋತ್ರಿಯ ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ ಆ.6ರಂದು ಬೆಳಗ್ಗೆ 10.30ಕ್ಕೆ ಮಾಜಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ 77ನೇ ಜನ್ಮದಿನಾಚರಣೆ ಹಾಗೂ ವಿ. ಶ್ರೀನಿವಾಸ ಪ್ರಸಾದ್ ವ್ಯಕ್ತಿತ್ವ ಮತ್ತು ಹೋರಾಟ ವಿಚಾರ ಮಂಥನ ಆಯೋಜಿಸಲಾಗಿದೆ ಎಂದು ಸಮಾನತೆ- ಸ್ವಾಭಿಮಾನ- ಸ್ವಾವಲಂಬನೆ ಪ್ರತಿಷ್ಠಾನದ ಕಾರ್ಯದರ್ಶಿ ಮುಳ್ಳೂರು ನಂಜುಂಡಸ್ವಾಮಿ ಹೇಳಿದರು.
ಪ್ರತಿಷ್ಠಾನದೊಂದಿಗೆ ಮೈಸೂರು ವಿಶ್ವವಿದ್ಯಾಲಯ, ಬಿ.ಆರ್.ಅಂಬೇಡ್ಕರ್ ಎಜುಕೇಷನಲ್ ಮತ್ತು ಕಲ್ಚರಲ್ ಟ್ರಸ್ಟ್ ಹಾಗೂ ಸಮಾನತೆ ಪ್ರಕಾಶನ ಸಹಯೋಗವಿದ್ದು, ವಿಶ್ವ ಮೈತ್ರಿ ಬುದ್ಧ ವಿಹಾರದ ಕಲ್ಯಾಣಸಿರಿ ಭಂತೇಜಿ ಸಾನ್ನಿಧ್ಯದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿ. ಶ್ರೀನಿವಾಸ ಪ್ರಸಾದ್ ವ್ಯಕ್ತಿತ್ವ ಕುರಿತು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಹೋರಾಟದ ನೆಲೆಗಳ ಕುರಿತು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ವಿಚಾರ ಮಂಡಿಸುವರು. ಕಾಂಗ್ರೆಸ್ ಮುಖಂಡ ಕೆ.ಆರ್.ರಮೇಶ್ ಕುಮಾರ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ವಿ. ಶ್ರೀನಿವಾಸ ಪ್ರಸಾದ್ ಚಿಂತನೆಗಳು ಎಂಬ ಕೃತಿ ಬಿಡುಗಡೆಯೂ ನಡೆಯಲಿದೆ ಎಂದು ಹೇಳಿದರು.
ಪ್ರತಿಷ್ಠಾನದ ಟ್ರಸ್ಟಿ ಭರತ್ ರಾಮಸ್ವಾಮಿ ಮಾತನಾಡಿ, ಅಂದು ಬೆಳಗ್ಗೆ 9ಕ್ಕೆ ಹೂಟಗಳ್ಳಿಯ ಒಡನಾಡಿ ಸಂಸ್ಥೆಯಲ್ಲಿಯೂ ಟ್ರಸ್ಟ್ ಸದಸ್ಯರು ಜನ್ಮದಿನ ಆಚರಿಸಲಿದ್ದು, ಶ್ರೀನಿವಾಸ ಪ್ರಸಾದ್ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಟ್ರಸ್ಟಿಗಳಾದ ಶಾಂತರಾಮ ಶೆಟ್ಟಿ, ಡಿ.ವೆಂಕಟರಾಜು, ಸಿ.ಜಿ.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net