20ರಂದು ಬೆಳಾಲು ಅಂತೋಡಿಯಲ್ಲಿ ಯುವ ಸಿರಿ : ಕೆ.ಮೋಹನ್ ಕುಮಾರ್ ಮಾಹಿತಿ

Published on

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ, ಶ್ರೀ ಧ.ಮಂ.ಕಾಲೇಜು ರಾಷ್ಟ್ರೀಯ ಯೋಜನಾ ಘಟಕಗಳು, ಶ್ರೀ ಧ.ಮಂ.ಸ್ಪೋರ್ಟ್ಸ್ ಕ್ಲಬ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ತಾಲೂಕು ಪತ್ರಕರ್ತರ ಸಂಘ, ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಸಹಯೋಗದಲ್ಲಿ, ದೇವಸ್ಥಾನದ ಸಮೀಪದ ಗದ್ದೆಯಲ್ಲಿ ಅ.20ರಂದು ಯುವ ಸಿರಿ, ರೈತ ಭಾರತದ ಐಸಿರಿ ಎಂಬ 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ನೇಜಿ ನಾಟಿ ಕಾರ್ಯಕ್ರಮ ನಡೆಯಲಿದೆ ಎಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಕೆ.ಮೋಹನ್ ಕುಮಾರ್ ಹೇಳಿದರು.

ಉಜಿರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಹಾಗೂ ಭತ್ತದ ಕೃಷಿ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನಂತೋಡಿಯಲ್ಲಿರುವ ನಾಲ್ಕೂವರೆ ಎಕರೆ ಗದ್ದೆಯಲ್ಲಿ ಭತ್ತದ ಬಿತ್ತನೆಯಿಂದ ಕಟಾವುವರೆಗೆ ಯುವ ಜನತೆ ನಿರ್ವಹಿಸುವರು. ನಾಟಿಯ ಬಳಿಕ, ಗೊಬ್ಬರ ಹಾಕುವುದು, ಪೋಷಣೆ, ಕಟಾವು ಮಾಡಿ ಬಳಿಕ ಬೈಹುಲ್ಲನ್ನು ನಂದ ಗೋಕುಲಕ್ಕೆ ತಲುಪಿಸಲಾಗುವುದು. ಭತ್ತದಿಂದ ಅಕ್ಕಿ ಮಾಡಿ ಮುಡಿ ಕಟ್ಟಿ ದೇವಸ್ಥಾನಕ್ಕೆ ನೀಡಲಾಗುವುದು ಎಂದರು.

ಸೋನಿಯಾ ಯಶೋವರ್ಮ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಉಜಿರೆ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶಚಂದ್ರ ಎಸ್, ಉಜಿರೆ ಕಾಲೇಜು ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಸಿರಿ ಸಂಸ್ಥೆಯ ಎಂ.ಡಿ. ಕೆ.ಎನ್.ಜನಾರ್ದನ, ರವೀಶ್ ಪಡುಮಲೆ, ಪೂರಣ್ ವರ್ಮ, ಚೈತ್ರೇಶ್ ಇಳಂತಿಲ, ಬಿ.ಕೆ.ಧನಂಜಯ ರಾವ್, ಶ್ರೀನಿವಾಸ ಗೌಡ ಬೆಳಾಲು, ಜೇಮ್ಸ್ ಅಬ್ರಹಾಂ, ಬಾಲಕೃಷ್ಣ ಪೂಜಾರಿ ಬಜೆ ಭಾಗವಹಿಸಲಿದ್ದಾರೆ. ಕೃಷಿ ಸಾಧಕ ಬಿ.ಕೆ.ದೇವರಾವ್ ಅವರನ್ನು ಗೌರವಿಸಲಾಗುವುದು ಎಂದರು.

ಎಸ್‌ಡಿಎಂ ಕಾಲೇಜು ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್, ಮಾಜಿ ಕಾರ್ಯದರ್ಶಿ ಶ್ರೀಧರ್ ಕೆ.ವಿ, ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಉಪಸ್ಥಿತರಿದ್ದರು.

500 ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ನೇಜಿನಾಟಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸುಮಾರು 500ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ನೇಜಿ ನಾಟಿ ಮಾಡಲಾಗುತ್ತದೆ. ಬಿತ್ತನೆ ಕಾರ್ಯದಿಂದ ಕಟಾವು ತನಕ ಹಂತ-ಹಂತವಾಗಿ ವಿದ್ಯಾರ್ಥಿಗಳಿಂದ ಕೆಲಸ ನಡೆಯುತ್ತದೆ. ಅ.17ರಂದು ನೇಜಿ ತೆಗೆಯಲಾಗುತ್ತದೆ. ಅ.20ರಂದು ಎಲ್ಲರ ಕೂಡುವಿಕೆಯೊಂದಿಗೆ ನೇಜಿ ನಾಟಿ ಮಾಡಲಾಗುತ್ತದೆ ಎಂದು ಕೆ.ಮೋಹನ್ ಕುಮಾರ್ ತಿಳಿಸಿದರು.

ದೇವರ ನೈವೇದ್ಯಕ್ಕೆ ಸಮರ್ಪಣೆ

ನೇಜಿ ನಾಟಿಯಾದ ನಂತರ ಅನಂತೋಡಿ ಅನಂತಪದ್ಮನಾಭ ದೇಗುಲದ ವ್ಯವಸ್ಥಾಪನಾ ಸಮಿತಿಯವರು ನಿರ್ವಹಣೆ ಮಾಡುತ್ತಾರೆ. ಭತ್ತದ ಕಟಾವು ಆದ ಮೇಲೆ ಮಿಲ್ಲಿಗೆ ಹಾಕಿ ಅಕ್ಕಿಯನ್ನು ಮುಡಿ ಕಟ್ಟಿ ಶ್ರೀ ಕ್ಷೇತ್ರ ಧರ್ಮಸ್ಥಳ, ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಹಾಗೂ ಸ್ಥಳಿಯ ಹಲವು ದೇವಸ್ಥಾನಗಳಿಗೆ ಮೆರವಣಿಗೆ ಮೂಲಕ ತೆರಳಿ ದೇವರಿಗೆ ನೈವೇದ್ಯಕ್ಕೆ ಸಮರ್ಪಣೆ ಮಾಡಲಾಗುತ್ತದೆ. ನಂತರ ಬೈ ಹುಲ್ಲನ್ನು ನಂದಗೋಕುಲ ಗೋ ಶಾಲೆಗೆ ನೀಲಾಗುತ್ತದೆ ಎಂದು ಕೆ.ಮೋಹನ್ ಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net