

ಇಳಕಲ್ಲ(ಗ್ರಾ) : ತಾಲೂಕಿನ ಸುಕ್ಷೇತ್ರ ಗುಗ್ಗಲಮರಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಮೇ 20 ರಂದು ನಡೆಯಲಿದೆ.
ಈ ಭಾಗದ ಪ್ರಭಾವಿ ದೇವಿಯಾಗಿರುವುದರಿಂದ ಪ್ರತಿ ಅಮಾವಾಸ್ಯೆಗೆ, ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಈ ದೇವಿಗೆ ನಡೆದುಕೊಳ್ಳುವ ಭಕ್ತರ ಸಂಖ್ಯೆ ದೊಡ್ಡದಿದೆ. ಇಲ್ಲಿ ಮೂರು ವರ್ಷಕೊಮ್ಮೆ ಜಾತ್ರೆ ನಡೆಸುವ ಸಂಪ್ರದಾಯವಿದ್ದು, ಜಾತ್ರೆ ಸಂದರ್ಭದಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಬಂದು ದೇವಿಗೆ ಹರಕೆ ತೀರಿಸುತ್ತಾರೆ.
ಇಲ್ಲಿ ದೇವಿಯ ಹೆಸರಿನಲ್ಲಿ ಕೋಣವನ್ನು ಬಿಟ್ಟು, ಅದನ್ನು ಜಾತ್ರಾ ಸಮಯದಲ್ಲಿ ಬಲಿ ಕೊಡಲಾಗುತ್ತಿತ್ತು ಎಂಬ ಮಾತುಗಳು ಕೇಳಿ ಬಂದರೂ, ಈಗ ಅಂತಹ ಯಾವುದೇ ಸಂಪ್ರದಾಯ ಇಲ್ಲ ಎಂದು ಹೇಳಲಾಗುತ್ತದೆ.
ಜಾತ್ರಾ ಮಹೋತ್ಸವ ಅಂಗವಾಗಿ ಮೇ 20 ರಂದು ರಾತ್ರಿ 10 ಗಂಟೆಗೆ ‘ದಿಲ್ಲಿ ಹೊಕ್ಕ ಪುಂಡ ಹುಲಿ ’ ಮತ್ತು ಮೇ 21 ರಂದು ರಾತ್ರಿ 10 ಗಂಟೆಗೆ ‘ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್’ ನಾಟಕ ಪ್ರದರ್ಶನಗೊಳ್ಳಲಿವೆ.