

ಬಾಳೆಹೊನ್ನೂರು: ರಂಭಾಪುರಿ ಪೀಠದ 120ನೇ ಜಗದ್ಗುರುಗಳಾಗಿ ಶ್ರೀಪೀಠವನ್ನು ಅಲಂಕರಿಸಿದ್ದ ಲಿಂ. ಶ್ರೀರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವವನ್ನು ಡಿ.15ರ ಭಾನುವಾರ ಆಯೋಜಿಸಲಾಗಿದೆ.
ರಂಭಾಪುರಿ ಪೀಠದ ಶ್ರೀ ರುದ್ರಮುನೀಶ್ವರ ಸಮುದಾಯ ಭವನದಲ್ಲಿ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹಾಗೂ ಶ್ರೀ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳುವಹಿಸುವರು.
ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಸಮಾರಂಭ ಉದ್ಘಾಟಿಸಲಿದ್ದು, ಧರ್ಮ ಚೇತನ ಕೃತಿಯನ್ನು ಮಾಜಿ ಸಂಸದ ಗೌಡಗಾಂವ ಹಿರೇಮಠದ ಡಾ.ಜಯಸಿದ್ಧೇಶ್ವರ ಶಿವಾಚಾರ್ಯರು, ಬಾಳ ಹೊಂಗಿರಣ ಕೃತಿಯನ್ನು ಮುಕ್ತಿಮಂದಿರ ಕ್ಷೇತ್ರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹಾಗೂ ರಂಭಾಪುರಿ ಬೆಳಗು ವಿಶೇಷಾಂಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಬಿಡುಗಡೆಗೊಳಿಸುವರು.
ಸಿಯುಪಿಎ ಮತ್ತು ಪಿಇಟಿಎ ಇಂಡಿಯಾ ಸಂಸ್ಥೆ ದಾನ ನೀಡಿದ ಯಾಂತ್ರಿಕ ಆನೆಯ ಸಮರ್ಪಣೆ ಈ ಸಂದರ್ಭದಲ್ಲಿ ನಡೆಯಲಿದೆ. ಅ.ಭಾ.ವೀ. ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷ ಎಡೆಯೂರು ಕ್ಷೇತ್ರದ ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು. ಬಂಕಾಪುರ ಅರಳೆಲೆ ಹಿರೇಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನುಡಿ ನಮನ ಸಲ್ಲಿಸುವರು. ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ ಅವರಿಗೆ ಜನ್ಮ ಅಮತ ಮಹೋತ್ಸವ ಅಂಗವಾಗಿ ಗೌರವ ಗುರುರಕ್ಷೆ ನಡೆಯಲಿದೆ.
ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿ, ಶಿವಮೊಗ್ಗ ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ಸಂಸ್ಥಾಪಕರಾದ ವಿಘ್ನೇಶ್ವರಯ್ಯ ಸೋಲಾಪುರ, ಇಂದಿರಾ, ಕೂಡ್ಲಿಗೆರೆಯ ಜಲಜಾಕ್ಷಮ್ಮ, ಸವಣೂರಿನ ಡಾ. ಗುರುಪಾದಯ್ಯ ವೀ. ಸಾಲಿಮಠ ಅವರಿಗೆ ವಿಶೇಷ ಗುರುರಕ್ಷೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಅನುಗ್ರಹಿಸುವರು.
ಅಂದು ಬೆಳಗ್ಗೆ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿ, ಶ್ರೀಚೌಡೇಶ್ವರಿ ಹಾಗೂ ಶ್ರೀಸೋಮೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ-ಅಷ್ಟೋತ್ತರ ಮಹಾಮಂಗಲ ನಡೆಯಲಿದೆ. ಲಿಂ.ಶ್ರೀ ಮದ್ ರಂಭಾಪುರಿ ವೀರರುದ್ರಮುನಿದೇವ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಪುಷ್ಪಾಲಂಕಾರ ಭಕ್ತಿ ಸಮರ್ಪಣೆ ನಡೆಯುವುದು. ಸಮಾರಂಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್, ಬೆಂಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯು.ಎಂ.ಬಸವರಾಜ್ ಭಾಗವಹಿಸುವರು.