

ಸಕಲೇಶಪುರ: ಸಮಾನತೆಯ ಹರಿಕಾರ, ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಕಂಚಿನ ಪ್ರತಿಮೆಯ ಅನಾವರಣದ ಕಾರ್ಯಕ್ರಮ ಗುರುವಾರ ಪಟ್ಟಣದಲ್ಲಿ ನಡೆಯಲಿದೆ ಎಂದು ವೀರಶೈವ ಸಮಾಜದ ಮುಖಂಡ ಯಡೇಹಳ್ಳಿ ಮಂಜುನಾಥ್ ಹೇಳಿದರು.
ಹಲವು ದಶಕಗಳ ಹೋರಾಟದ ಫಲವಾಗಿ ಪಟ್ಟಣದಲ್ಲಿ ಮಲೆನಾಡು ವೀರಶೈವ ಸಮಾಜದ ವತಿಯಿಂದ ಎಲ್ಲ ಸಮಾಜದವರು ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎರಡು ಟನ್ ತೂಕದ ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆಯನ್ನು ಜೂ. 13ರಂದು ಅನಾವರಣ ಮಾಡಲಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 9 ಗಂಟೆಗೆ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಬಸವೇಶ್ವರ ಪುತ್ಥಳಿವರೆಗೆ ನಗರದ ರಾಜಬೀದಿಯಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಬೃಹತ್ ಮೆರವಣಿಗೆ ಮಾಡಲಾಗುವುದು. ಮಧ್ಯಾಹ್ನ 12 ಗಂಟೆಗೆ ಬಸವೇಶ್ವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಧ್ಯಾಹ್ನ 1.30ಕ್ಕೆ ಬ್ಯಾಕರವಳ್ಳಿ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಬೃಹತ್ ಧಾರ್ಮಿಕ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೇಲೂರು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ತೆಂಕಲಗೋಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ ಎಂದು ವಿವರಿಸಿದರು.
ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ದೇವರಾಜು (ದಿವಾನ್) ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಲೋಕಸಭೆ ಮಾಜಿ ಸದಸ್ಯ ಜಿ.ಎಸ್.ಬಸವರಾಜು, ಶಾಸಕರಾದ ಸಿಮೆಂಟ್ ಮಂಜು, ಎಚ್.ಕೆ ಸುರೇಶ್ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ರ ನಂತರ ಅನ್ನದಾಸೋಹ ನಡೆಯಲಿದೆ ಎಂದು ತಿಳಿಸಿದರು.
ವೀರಶೈವ ಸಮಾಜದ ಮುಖಂಡರಾದ ಹುರುಡಿ ಅರುಕುಮಾರ್, ಎ.ವಿ.ನರೇಶ್, ಮಠಸಾಗರ ಶ್ರೀಧರ್, ಲೋಹಿತ್ ಜಂಬರ್ಡಿ, ಶಶಿಕುಮಾರ್, ಸಂಗಪ್ಪ, ನಾಗರ ಹಿತೇಶ್, ಶಶಿಕಲಾ ಲೋಕೇಶ್, ವಿಜಯ ಧನ್ಯಕುಮಾರ್ ಇದ್ದರು.