

ಲಿಂಗಸುಗೂರು: ತಾಲೂಕು ವೀರಶೈವ ಜಂಗಮ ಸಮಾಜದಿಂದ ಪಟ್ಟಣದಲ್ಲಿ ಮಾ.12 ರಂದು ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಜಂಗಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಧರ್ಮ ಸಂಸ್ಥಾಪನೆಗಾಗಿ ಶಿವನ ಅಂಶದಿಂದ ಆಂಧ್ರ ಪ್ರದೇಶದ ಕೊಲ್ಲಿಪಾಕದ ಶ್ರೀ ಸೋಮೇಶ್ವರ ಲಿಂಗದಿಂದ ಅವತರಿಸಿದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವನ್ನು ಮಾ.12ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಅದರಂತೆ ವೀರಶೈವ ಜಂಗಮ ಸಮಾಜದಿಂದ ಪಟ್ಟಣದ ಜಂಗಮ ಸಮಾಜದ ಜಗದ್ಗುರು ಪಂಚಾಚಾರ್ಯರ ಮಂಗಲ ಭವನದಿಂದ ಶ್ರೀ ಈಶ್ವರ ದೇವಸ್ಥಾನದವರೆಗೆ ಅಂದು ಬೆಳಗ್ಗೆ 10 ಗಂಟೆಗೆ ಕುಂಭ ಕಳಸ, ಬಾಜಾ ಭಜಂತ್ರಿಯೊಂದಿಗೆ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಜರುಗಲಿದೆ.
ಮಧ್ಯಾಹ್ನ 12 ಗಂಟೆಗೆ ಈಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಾಲಹಳ್ಳಿ ಬೃಹನ್ಮಠದ ಜಯಶಾಂತಲಿಂಗ ಶಿವಾಚಾರ್ಯರು, ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು, ಯರಡೋಣಿ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿಗಳು, ಗುರುಗುಂಟಾ ಚರಮೂರ್ತೇಶ್ವರ ಮಠದ ಸದಾನಂದ ಶಿವಾಚಾರ್ಯರು ಇತರರು ಭಾಗವಹಿಸಲಿದ್ದಾರೆಂದು ತಿಳಿಸಿದರು. ಸಮಾಜದ ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಯಲಗಲದಿನ್ನಿ, ಪ್ರಮುಖರಾದ ಮರಿಸ್ವಾಮಿ ಬಳ್ಳಾರಿ ಹಿರೇಮಠ, ಜಂಬಯ್ಯಸ್ವಾಮಿ ಹಿರೇಮಠ, ಮಹಾದೇವಯ್ಯ ಗೌಡೂರು, ವಿರೂಪಾಕ್ಷಯ್ಯ ಹಿರೇಮಠ ಇದ್ದರು.