

ತೇರದಾಳ: ಪಟ್ಟಣದ ಆರಾಧ್ಯ ದೈವ, ಶರಣಪೀಠದ ಮಹಾನ್ ಚೇತನ ಅಲ್ಲಮ ಪ್ರಭುದೇವರ ಜಾತ್ರೆ ಶ್ರಾವಣ ಮಾಸದ ನಾಲ್ಕನೇ ಸೋಮವಾರ ಸೆ.11ರಂದು ಸಂಭ್ರಮದಿಂದ ನಡೆಯಲಿದೆ ಎಂದು ಊರಿನ ಧಣಿ ಪ್ರವೀಣ ನಾಡಗೌಡ ಹೇಳಿದರು.
ಪಟ್ಟಣದ ಕ್ಷೇತ್ರಾಧಿಪತಿ ಶೂನ್ಯ ಪೀಠಾಧೀಶ ಅಲ್ಲಮಪ್ರಭುದೇವರ ಜಾತ್ರಾ ಮಹೋತ್ಸವದಂಗವಾಗಿ ದೇವಸ್ಥಾನ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಂದು ಪಲ್ಲಕ್ಕಿ ಉತ್ಸವ ನಡೆಯಲಿದೆ. 12ರಂದು ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ. ಜಾತ್ರೆಗೆ ರಾಜ್ಯವಷ್ಟೇ ಅಲ್ಲದೆ, ಹೊರರಾಜ್ಯದ ಭಕ್ತರೂ ಆಗಮಿಸಲಿದ್ದು, ಜಾತ್ರೆ ಬಹಳಷ್ಟು ಶಿಸ್ತುಬದ್ಧವಾಗಿ ಜರುಗಬೇಕು. ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಮಾರ್ಗದರ್ಶನವೂ ಮುಖ್ಯವಾಗಿದೆ. ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಹೆಸ್ಕಾಂನವರು ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು. ರಸ್ತೆ ಬದಿ ಸ್ವಚ್ಛತೆ ಹಾಗೂ ವಾಹನ ನಿಲುಗಡೆ ಸೇರಿ ಬರುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಠಾಣಾಧಿಕಾರಿ ಅಪ್ಪು ಐಗಳಿ ಮಾತನಾಡಿ, ಜಾತ್ರಾ ಮಹೋತ್ಸವದಲ್ಲಿ ಇಲಾಖೆಯಿಂದ ಸೂಕ್ತ ಭದ್ರತೆ ಒದಗಿಸಲಾಗುವುದು. ಸಾರ್ವಜನಿಕರು ನಿಯೋಜಿತ ಸ್ಥಳಗಳಲ್ಲೇ ವಾಹನಗಳನ್ನು ನಿಲ್ಲಿಸಬೇಕು. ಜಾತ್ರೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬಂದರೆ ಕೂಡಲೇ ಗಮನಕ್ಕೆ ತರಬೇಕೆಂದು ತಿಳಿಸಿದರು.
ಸಂತೋಷ ತೆಳಗಿನಮನಿ, ಪುರಸಭೆ ಮ್ಯಾನೇಜರ್ ಶಿವಕುಮಾರ ಬಿ. ಪಾಟೀಲ, ಕೇದಾರಿ ಪಾಟೀಲ, ಪರಯ್ಯ ಮೇಲಿನಮನಿ, ನಿರಂಜನ ಬಾವಿ, ಹೆಸ್ಕಾಂ ಅಧಿಕಾರಿಗಳು ಇದ್ದರು.