

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಶಬರಿ ನಗರದಲ್ಲಿ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಗ್ರಾಮೀಣ ವಲಯದ ತಾಲೂಕು ಮಟ್ಟದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.
ಡಾ. ರಾಧಾ ಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರು ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡ ಶಿಕ್ಷಕರು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಹಾಗೂ ಅಂಗವಿಕಲರಿಗೆ ಗಾಲಿ ಕುರ್ಚಿ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹಿಂದೆ ಗುರು ಮುಂದೆ ಗುರಿ ಇದ್ದರೆ ಏನನ್ನಾದರೂ ಸಾದಿಸಬಹುದು. ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ಶಾಲು ಹಾಕಿ ಸನ್ಮಾನ ಮಾಡಿದರೆ ಸಲ್ಲದು. ಜೀವನ ಪೂರ್ತಿ ಶಿಕ್ಷಣವನ್ನು ಧಾರೆ ಎರೆದು ತಮ್ಮ ನಡೆ ನುಡಿ ಆಚಾರ ವಿಚಾರಗಳ ಮೂಲಕ ದಾರಿ ತೋರಿಸಿಕೊಟ್ಟ ಗುರುಗಳಿಗೆ ಗೌರವ ಸಲ್ಲಿಸಬೇಕು. ಸಾಮಾಜಿಕ ನ್ಯಾಯ, ಸಮಾನತೆ ಜತೆಗೆ ಉತ್ತಮ ರೀತಿಯ ಸಂಬಂಧವನ್ನು ವಿದ್ಯಾರ್ಥಿಗಳೊಂದಿಗೆ ಬೆಳೆಸಿಕೊಂಡು ಪರಿವರ್ತನೆ ತರುವ ಪ್ರಾಮಾಣಿಕ ಪ್ರಯತ್ನ ಶಿಕ್ಷಕರಿಂದ ಆಗಬೇಕು ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಬೇಕು. ಆಧುನಿಕ ಜಗತ್ತಿನಲ್ಲಿ ಮುಳುವಾಗಿ ನಿಂತಿರುವ ಸ್ಮಾರ್ಟ ಫೋನ್ ಗಳಿಂದ ದೂರ ಉಳಿದು, ದುಶ್ಚಟಗಳನ್ನು ಮೆಟ್ಟಿ ನಿಂತು ಉತ್ತಮ ಸಮಾಜ ನಿರ್ವಣವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಶಿಕ್ಷಣದಿಂದ ವಂಚಿತರಾಗುವ ಹಿಂದುಳಿದ ವರ್ಗಗಳ ಮಕ್ಕಳನ್ನು ಉತ್ತಮರನ್ನಾಗಿ ಮಾಡುವ ವಿಭಾಗವೇ ಸರ್ಕಾರಿ ಶಾಲೆಗಳು ಎಂದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಜೆ.ಬಿ.ಮಜ್ಜಿಗಿ, ಅಪರ ಆಯುಕ್ತರ ಕಾರ್ಯಾಲಯದ ಉಪ ನಿರ್ದೇಶಕ ಗಿರೀಶ ಪದಕಿ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಸಂತೋಷ ಲಿಂಬುಗೋಳ, ವಿಜಯಲಕ್ಷ್ಮೀ ಶೆಟ್ಟಿ, ಇತರರು ಇದ್ದರು.