

ಆನಂದಪುರ: ಇಲ್ಲಿಗೆ ಸಮೀಪದ ಚನ್ನಕೊಪ್ಪ ಗ್ರಾಮದ ತೋಟದ ಮನೆಯೊಂದರಲ್ಲಿ ಸೆ.12ರಂದು ರುದ್ರಾಭಿಷೇಕ ಹಾಗೂ ಮಂಗಳಗೌರಿ ಬಾಗಿನ ಸಮರ್ಪಣಾ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಚೆನ್ಮಕೊಪ್ಪದ ಯುವ ಮುಖಂಡ ಶಿವಕುಮಾರ ಗೌಡ ತಿಳಿಸಿದ್ದಾರೆ. ಮುರುಘಾ ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಮೂಲೆಗದ್ದೆಯ ಅಭಿನವ ಚನ್ನಬಸವ ಸ್ವಾಮೀಜಿ, ಜಡೆಯ ಡಾ.ಮಹಾಂತ ಸ್ವಾಮೀಜಿ, ಹಾರನಹಳ್ಳಿಯ ಶ್ರೀನೀಲಕಂಠ ಸ್ವಾಮೀಜಿ ಸೇರಿ ಹಲವು ವೀರಶೈವ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ಅಂದು ಬೆಳಗ್ಗೆ 6 ರಿಂದ 10 ರವರೆಗೆ ರುದ್ರಾಭಿಷೇಕ ಪೂಜೆ, ಮಧ್ಯಾಹ್ನ 12ಗಂಟೆಗೆ ಆಗಮಿಸಿದ ಎಲ್ಲ ಮುತ್ತೆÊದೆಯರಿಗೆ ಮಂಗಳ ದ್ರವ್ಯಗಳೊಂದಿಗೆ ಮಂಗಳಗೌರಿ ಬಾಗೀನ ಸಮರ್ಪಣಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭೆ ಮತ್ತು ದಾಸೋಹ ನಡೆಯಲಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರು, ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಗೋಪಾಲಕೃಷ್ಣ ಬೇಳೂರು, ಆಮ್ ಆದ್ಮಿ ರಾಜ್ಯಾಧಕ್ಷ ಮುಖ್ಯಮಂತ್ರಿ ಚಂದ್ರು, ಮಾಜಿ ಶಾಸಕ ಹರತಾಳು ಹಾಲಪ್ಪ , ಆಮ್ ಆದ್ಮಿ ಪ್ರಮುಖರಾದ ಉಮಾಶಂಕರ್, ನಾಗಣ್ಣ, ಜಗದೀಶ್, ಉಷಾ ಮೋಹನ್, ಕುಶಾಲಸ್ವಾಮಿ, ಸ್ಥಳೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.