

ಸಕಲೇಶಪುರ : ಒಂದು ದಿನ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದ್ದು, ವ್ಯಾಪಕಗಾಳಿ ಹಾಗೂ ತುಂತುರು ಮಳೆಗೆ ಜನರು ಬೇಸತ್ತು ಹೋಗಿದ್ದಾರೆ.
ಮೇ ತಿಂಗಳ ಮೊದಲವಾರದಿಂದ ಆರಂಭವಾಗಿದ್ದ ಸೊನೆ ಮಳೆ ಬಿರುಸು ಪಡೆದು ಹದಿನೈದು ದಿನಗಳಾಗುತ್ತಿದೆ. ಕಳೆದ ವಾರ ಸುರಿದ ಮಳೆಗೆ ಹೇಮಾವತಿ ನದಿ ಸೇರಿದಂತೆ ತಾಲೂಕಿನ ಎಲ್ಲ ಉಪನದಿಗಳು ಉಕ್ಕಿ ಹರಿದು ಸಾಕಷ್ಟು ಅನಾಹುತ ಉಂಟು ಮಾಡಿದ್ದರೆ, ಹೇಮಾವತಿ ನದಿ ಜನವಸತಿ ಪ್ರದೇಶಗಳಿಗೂ ನೀರು ನುಗ್ಗಿ ನಷ್ಟ ಉಂಟು ಮಾಡಿತ್ತು.
ಆದರೆ ಶನಿವಾರ ಇಡೀ ದಿನ ಮಳೆಯಾಗದ ಪರಿಣಾಮ ಜನವಸತಿ ಪ್ರದೇಶಗಳಿಂದ ನೀರು ಹಿಂದೆ ಸರಿದಿದ್ದು, ಹೇಮಾವತಿ ಹರಿಯುವಿಕೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಇದಲ್ಲದೆ ತಾಲೂಕಿನ ಬಹುತೇಕ ನದಿಗಳ ಹರಿಯುವಿಕೆಯಲ್ಲೂ ಇಳಿಕೆ ಕಂಡಿದೆ. ಇದರಿಂದ ಭತ್ತದ ಗದ್ದೆಗಳು ನದಿ ನೀರಿನಿಂದ ಬಿಡುಗಡೆಗೊಂಡಿವೆ. ಆದರೆ ಭಾನುವಾರ ಮಧ್ಯರಾತ್ರಿಯಿಂದ ಮತ್ತೆ ಮಳೆ ಆರಂಭವಾಗಿದೆ. ಆದರೆ ಬಿರುಸು ಕಳೆದು ಕೊಂಡಿದ್ದು ತುಂತುರು ಮಳೆಯಾಗುತ್ತಿದೆ.
ಶನಿವಾರ ಮಳೆ ಬಿಡುವು ನೀಡಿದ್ದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ, ಶಿರಾಡಿಘಾಟ್‌ನಲ್ಲಿ ಭೂಕುಸಿತಗೊಂಡಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಕ್ಕೆ ಕೈಹಾಕಿತ್ತು. ಇದರಿಂದಾಗಿ ಇಡೀ ದಿನ ಭಾರಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು. ಶುಕ್ರವಾರ ರಾತ್ರಿ ಸುಬ್ರಮಣ್ಯ ಸಕಲೇಶಪುರ ನಡುವಿನ ರೈಲ್ವೆ ಮಾರ್ಗದ 63 ನೇ ಕಿ.ಮೀ ಸಮೀಪ. ಭೂಕುಸಿತ ಸಂಭವಿಸಿದ್ದ ಪ್ರದೇಶದ ಮಣ್ಣು ತೆರವು ಹಾಗೂ ರೈಲು ಹಳಿ ಜೋಡಣೆ ಕಾರ್ಯ ಮಳೆಯಿಲ್ಲದ ಕಾರಣ ಶನಿವಾರ ಬಿರುಸು ಪಡೆದಿತ್ತು. ಇದಕ್ಕಾಗಿ ಮೈಸೂರು ಸೇರಿದಂತೆ ರಾಜ್ಯದ ವಿವಿಧೇಡೆಯಿಂದ ಕರೆಸಿರುವ ನಾಲ್ಕು ನೂರು ರೈಲ್ವೆ ಕಾರ್ಮಿಕರು ನೂರಾರು ಅಕಾರಿಗಳು ತೆರವು ಕಾರ್ಯಚರಣೆ ನಡೆಸಿದರು.
ಭಾನುವಾರ ಸಹ ಮಣ್ಣು ತೆರವು ಕಾರ್ಯಾಚರಣೆ ಬಿರುಸಿನಿಂದ ಕೂಡಿದ್ದು, ಮಳೆ ಬಿಡುವು ನೀಡಿದಲ್ಲಿ ನಾಲ್ಕು ದಿನಗಳಲ್ಲಿ ಕಾರ್ಯಚರಣೆ ಕೊನೆ ಗೊಳ್ಳಲಿದೆ. ಮಳೆಯಾದರೆ ಮತ್ತಷ್ಟು ವಿಳಂಭವಾಗಲಿದೆ ಎನ್ನುತ್ತಾರೆ ಸ್ಥಳೀಯ ರೈಲ್ವೆ ಅಕಾರಿಗಳು. ಇನ್ನೂ ಓಡಳ್ಳಿ ಗ್ರಾಮ ಸಮೀಪ ಬಿರುಕು ಮೂಡಿರುವ ಸೋಮವಾರಪೇಟೆ, ಸಕಲೇಶಪುರ ನಡುವಿನ ರಸ್ತೆ ದುರಸ್ತಿ ಹಾಗೂ ಕಾಡುಮನೆ ರಸ್ತೆಯಲ್ಲಿ ಭೂಕುಸಿತ ತೆರವು, ಮರಗತ್ತೂರು ಒಡೆದ ಕೆರೆ ದುರಸ್ತಿ ಕಾರ್ಯಕ್ಕೆ ತಾಲೂಕು ಆಡಳಿತ ಚುರುಕು ನೀಡಿದ್ದು, ಬಿರುಸಿನ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಮಳೆ ಹಾನಿ ಪ್ರದೇಶಕ್ಕೆ ಶಾಸಕ ಸೀಮೇಟ್ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.