ಮೈಸೂರು ಬಿಡಲೊಲ್ಲದ ಶ್ರೀರಾಮ

dasara elephant srirama 1
Published on
  • 1.20 ಗಂಟೆ ಸತಾಯಿಸಿ ಲಾರಿ ಏರಿದ
  • ಶಿಬಿರದತ್ತ ತೆರಳಿದ ದಸರಾ ಗಜಪಡೆ

ಸದೇಶ್ ಕಾರ್ಮಾಡ್ ಮೈಸೂರು
ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಜಂಬೂಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಶುಕ್ರವಾರ ಅರಮನೆ ಆವರಣದಿಂದ ಶಿಬಿರಗಳತ್ತ ತೆರಳಿತು. ಮೈಸೂರು ಬಿಡಲೊಪ್ಪದ ದುಬಾರೆ ಆನೆ ಶಿಬಿರದ ಶ್ರೀರಾಮ 1.20 ಗಂಟೆ ಸತಾಯಿಸಿ ನಂತರ ಲಾರಿ ಏರಿದ. ಶ್ರೀರಾಮನನ್ನು ಲಾರಿ ಹತ್ತಿಸಲು ಅಂಬಾರಿ ಆನೆ ಅಭಿಮನ್ಯು ಸೇರಿದಂತೆ ಮೂರು ಆನೆಗಳು ಬರಬೇಕಾಯಿತು.

ಗಜಪಡೆಯ ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು ಸೇರಿದಂತೆ 9 ಆನೆಗಳು ಆ.7 ರಂದು ಆಗಮಿಸಿತ್ತು. ಎರಡನೇ ತಂಡದಲ್ಲಿ ಒಟ್ಟು 5 ಆನೆಗಳು ಸೆ.7 ರಂದು ನಗರಕ್ಕೆ ಆಗಮಿಸಿತ್ತು. ಮೊದಲ ತಂಡದಲ್ಲಿ ಆಗಮಿಸಿದ ಲಕ್ಷ್ಮಿ ಆನೆಯು ಶ್ರೀ ದತ್ತಾತ್ರೇಯ ಮರಿಗೆ ಅರಮನೆ ಆವರಣದಲ್ಲಿ ಜನ್ಮ ನೀಡಿತು. ಹೀಗಾಗಿ ಅರಮನೆ ಆವರಣದಿಂದ ಶುಕ್ರವಾರ ಮರಿಯಾನೆ ಸೇರಿದಂತೆ ಒಟ್ಟು 15 ಆನೆಗಳು ಶಿಬಿರದತ್ತ ಮುಖ ಮಾಡಿತು.

ಅರಮನೆ ಆವರಣದಲ್ಲಿ ಬೆಳಗ್ಗೆ 10ಕ್ಕೆ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಆನೆಗಳ ಪಾದಗಳನ್ನು ತೊಳೆದು ಹರಿಶಿನ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಯಿತು. ಬಳಿಕ ಆನೆಗಳಿಗೆ ಕಬ್ಬು, ಬೆಲ್ಲ ಹಾಗೂ ಹಣ್ಣು ಹಂಪಲುಗಳನ್ನು ನೀಡಲಾಯಿತು. ಅರ್ಚಕ ಪ್ರಹ್ಲಾದ್ ಪೂಜೆ ನೆರವೇರಿಸಿದರು. ಬೆಳಗ್ಗೆ 10.30 ರಿಂದ ಆನೆಗಳನ್ನು ಲಾರಿಗೆ ಹತ್ತಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಮಧ್ಯಾಹ್ನ 12.20ಕ್ಕೆ ಎಲ್ಲ ಆನೆಗಳು ಲಾರಿಯನ್ನು ಏರಿದವು. ಮಧ್ಯಾಹ್ನ 1.15ಕ್ಕೆ ಆನೆಗಳು ಶಿಬಿರದತ್ತ ಪ್ರಯಣ ಬೆಳೆಸಿತು.

10 ಸಾವಿರ ರೂ. ನಗದು:
ಅರಮನೆ ಮಂಡಳಿಯಿಂದ ಆನೆ ಮಾವುತರು ಮತ್ತು ಕಾವಾಡಿಗರು ಹಾಗೂ ಜಂಬೂಸವಾರಿ ಯಶಸ್ವಿಗೊಳಿಸಲು ದುಡಿದ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಒಟ್ಟು 50 ಜನರಿಗೆ ತಲಾ 10 ಸಾವಿರ ರೂ. ಗೌರವ ಧನ ನೀಡಲಾಯಿತು. ಆನೆ ಮಾವುತರು, ಕಾವಾಡಿ ಗರು ಹಾಗೂ ಅವರ ಕುಟುಂಬ ವರ್ಗಕ್ಕೆ ಅರಮನೆ ಮಂಡಳಿ ಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಮಾವುತರು ಮತ್ತು ಕಾವಾಡಿಗರಿಗೆ ವಸ್ತ್ರ ಹಾಗೂ ಸಿಹಿ ವಿತರಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮೇಯರ್ ಶಿವಕುಮಾರ್, ಡಿಸಿಎಫ್‌ಗಳಾದ ಕರಿಕಾಳನ್, ಕಮಲಾ ಕರಿಕಾಳನ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಹಾಗೂ ಇತರರು ಇದ್ದರು.

ಮರಿಯೊಂದಿಗೆ ಶಿಬಿರಕ್ಕೆ ತೆರಳಿದ ಲಕ್ಷ್ಮಿ
ಬಂಡೀಪುರದ ರಾಂಪುರ ಆನೆ ಶಿಬಿರದಿಂದ ಆಗಮಿಸಿದ ಲಕ್ಷ್ಮಿ ಆನೆಯು ಸೆ.13 ರಂದು ಗಂಡು ಮರಿಗೆ ಜನ್ಮ ನೀಡಿತ್ತು. ಈ ಆನೆ ಮರಿಗೆ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಶ್ರೀದತ್ತಾತ್ರೇಯ ಎಂದು ನಾಮಕರಣ ಮಾಡಿದರು. ತಾಯಿ ಹಾಗೂ ಮರಿಯನ್ನು ಪ್ರತ್ಯೇಕವಾಗಿ ಅರಮನೆಯ ಹಿಂಭಾಗದಲ್ಲಿ ಇರಿಸಲಾಗಿತ್ತು. ಶುಕ್ರವಾರ ಬೆಳಗ್ಗೆ 4.30ಕ್ಕೆ ಈ ಲಕ್ಷ್ಮಿ ಆನೆ ಹಾಗೂ ಶ್ರೀದತ್ತಾತ್ರೇಯನನ್ನು ಶಿಬಿರಕ್ಕೆ ಕಳುಹಿಸಿಕೊಡಲಾಯಿತು. ಇದರ ಜತೆಗೆ ಮತ್ತಿಗೋಡು ಆನೆ ಶಿಬಿರದ ಚೈತ್ರಾ ಆನೆಯನ್ನು ಸಹ ಕಳುಹಿಸಿ ಕೊಡಲಾಯಿತು.

ಪ್ರತ್ಯೇಕವಾಗಿ ತೆರಳಿದ ಅಭಿಮನ್ಯು
ಲಕ್ಷ್ಮಿ ಹಾಗೂ ಚೈತ್ರಾ ಆನೆಯು ಬೆಳಗ್ಗಿನ ಜಾವ ಒಟ್ಟಿಗೆ ತಮ್ಮ ಶಿಬಿರಗಳತ್ತ ಮುಖ ಮಾಡಿತು. ಉಳಿದ 11 ಆನೆಗಳು ಒಟ್ಟಿಗೆ ತೆರಳಿ ದವು. ಆದರೆ, ಅಂಬಾರಿ ಆನೆ ಅಭಿಮನ್ಯು ಪ್ರತ್ಯೇಕವಾಗಿ ತೆರಳಿತು. ಅಭಿಮನ್ಯು ಆನೆಯ ಮಾವುತ ಹಾಗೂ ಕಾವಾಡಿ ಕುಟುಂಬದ ಲಗೇಜ್ ಹೆಚ್ಚು ಇದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ದೊಡ್ಡ ಲಾರಿಯನ್ನು ತರಿಸಿ ಅಭಿಮನ್ಯುವನ್ನು ಕಳುಹಿಸಿಕೊಡಲಾಯಿತು.

ಲಾರಿ ಏರಲು ಒಲ್ಲೆ ಎಂದ ಶ್ರೀರಾಮ ಮಣ್ಣಿನಲ್ಲಿ ಬಿದ್ದು ಹೊರಳಾಡಿದ..!
ದುಬಾರೆ ಆನೆ ಶಿಬಿರದ ಶ್ರೀರಾಮ ಆನೆಯು ಲಾರಿ ಏರಲು ಸಾಕಷ್ಟು ಸತಾಯಿಸಿದ. ಲಾರಿ ಏರುವುದನ್ನು ತಪ್ಪಿಸಲು ಮಕ್ಕಳ ಹಾಗೆ ಮಣ್ಣಿನಲ್ಲಿ ಬಿದ್ದು ಹೊರಳಾಡಿದ. ಇದು ಅರಮನೆ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಕಂಡು ಬಂದ ಚಿತ್ರಣ.

ಬಂಡಿಪುರದ ಪಾರ್ಥಸಾರಥಿ ಆನೆಯು ಲಾರಿ ಏರಲು ಹಠ ಹಿಡಿದಾಗ ಸ್ಥಳಕ್ಕೆ ಆಗಮಿಸಿದ ಶ್ರೀರಾಮ ಆನೆಯು ಪಾರ್ಥಸಾರಥಿಯನ್ನು ಲಾರಿ ಹತ್ತಿಸಿದ. ಆದರೆ, ತನ್ನ ಸರದಿ ಬಂದಾಗ ಶ್ರೀರಾಮನು ಸಹ ಲಾರಿ ಏರಲು ನಿರಾಕರಿಸಿದ. ಬೆಳಗ್ಗೆ 10.50ಕ್ಕೆ ಶ್ರೀರಾಮನನ್ನು ಲಾರಿ ಹತ್ತಿಸಲು ಪ್ರಯತ್ನ ಪ್ರಾರಂಭವಾಯಿತು.

ಅಂಬಾರಿ ಆನೆ ಅಭಿಮನ್ಯು ಎರಡು ಬಾರಿ ದಂತದಿಂದ ಬಲವಾಗಿ ತಿವಿದರೂ ಶ್ರೀರಾಮ ಜೋರಾಗಿ ಘೀಳಿಟ್ಟನೇ ಹೊರತು ಲಾರಿ ಏರುವ ಮನಸ್ಸು ಮಾಡಲಿಲ್ಲ. ದಂತದಿಂದ ತಿವಿಯುವಾಗ ಶ್ರೀರಾಮ ಆನೆಯ ಮಾವುತನ ಕಾಲಿಗೆ ಪೆಟ್ಟಾಗುವ ಸಾಧ್ಯತೆ ಇತ್ತು. ಹೀಗಾಗಿ ದಂತದ ತಿವಿತ ನಿಲ್ಲಿಸಿ ದೂಡಿ ಹತ್ತಿಸುವ ಪ್ರಯತ್ನ ನಡೆಯಿತು. ಇನ್ನೇನು ನನ್ನನ್ನು ದೂಡಿ ಲಾರಿ ಹತ್ತಿಸುತ್ತಾರೆ ಎಂದು ತಿಳಿದ ಶ್ರೀರಾಮ ನೆಲಕ್ಕೆ ಹೊರಳುತ್ತಿದ್ದ. ಬೆಳಗ್ಗೆ 10.50 ರಿಂದ 11.17 ರವರೆಗೆ ನಡೆದ ಮೊದಲ ಹಂತದ ಪ್ರಯತ್ನ ವಿಫಲವಾಯಿತು. ತೀವ್ರ ಆಘಾತಕ್ಕೆ ಒಳಗಾಗಿದ್ದ ಶ್ರೀರಾಮ ಆನೆಗೆ ನಂತರ ತಣ್ಣೀರಿನ ಮಜ್ಜನ ಮಾಡಿಸಿ ವಿಶ್ರಾಂತಿ ನೀಡಿ ಬಳಿಕ ಅಭಿಮನ್ಯು, ಸುಗ್ರೀವ ಮತ್ತು ಗೋಪಿ ಆನೆಗಳು ಜತೆಗೂಡಿ ಬೆ.11.27 ರಿಂದ 11.35ರವರೆಗೆ ಎರಡನೇ ಹಂತದ ಕಸರತ್ತು ನಡೆಸಿದರೂ ಶ್ರೀರಾಮನನ್ನು ಲಾರಿ ಹತ್ತಿಸಲು ಸಾಧ್ಯವಾಗಲಿಲ್ಲ.

ಅರಣ್ಯ ಇಲಾಖೆಗೆ ಸೇರಿದ ಆನೆಗಳ ಕ್ಷಿಪ್ರ ಕಾರ್ಯಪಡೆ ವಾಹನದಲ್ಲಿ ಆನೆಗಳು ಸುಲಭವಾಗಿ ಹತ್ತಿ ಇಳಿಯುವ ವ್ಯವಸ್ಥೆ ಇದೆ. ಈ ಹಿನ್ನೆಲೆಯಲ್ಲಿ ಆ ವಾಹನದಲ್ಲಿದ್ದ ಅರ್ಜುನ ಆನೆಯನ್ನು ಕೆಳಗಿಳಿಸಿ ಶ್ರೀರಾಮನನ್ನು ಹತ್ತಿಸುವ ಮೂರನೇ ಪ್ರಯತ್ನವೂ (ಬೆ.11.35 ರಿಂದ 11.43) ವಿಫಲವಾಯಿತು. ನಂತರ ನಾಲ್ಕನೇ ಹಂತದ ಪ್ರಯತ್ನ ಮ.12.02ಕ್ಕೆ ಪ್ರಾರಂಭವಾಯಿತು. ಈ ಹಂತದಲ್ಲಿ ಮೂರು ಬಾರಿ ಶ್ರೀರಾಮ ನೆಲದಲ್ಲಿ ಮಲಗಿ ಲಾರಿ ಏರಲು ನಿರಾಕರಿಸಿದ. ಅಂತಿಮವಾಗಿ ಮಧ್ಯಾಹ್ನ 12.15ಕ್ಕೆ ಅಭಿಮನ್ಯು, ಸುಗ್ರೀವ ಮತ್ತು ಗೋಪಿ ಆನೆಗಳು ಬಲವಾಗಿ ದೂಡಿ ಶ್ರೀರಾಮನನ್ನು ಸಾಮಾನ್ಯ ಲಾರಿಯಲ್ಲೇ ಹತ್ತಿಸುವಲ್ಲಿ ಯಶಸ್ವಿಯಾದರು. ಆ ನಂತರ ಸುಗ್ರೀವ ಆನೆ ಸಹ ಸ್ವಲ್ಪ ಹೊತ್ತು ಲಾರಿ ಏರಲು ಸತಾಯಿಸಿ ನಂತರ ಯಶಸ್ವಿಯಾಗಿ ಏರಿದ.

ಕೆಲವು ಆನೆಗಳಿಗೆ ಲಾರಿಯಲ್ಲಿ ಪ್ರಯಣಿಸುವುದು ಆತಂಕ ಉಂಟು ಮಾಡುತ್ತದೆ. ಆ ಭಯದಿಂದಲೇ ಶ್ರೀರಾಮ ಆನೆಯು ಲಾರಿ ಏರಲು ಹಿಂದೇಟು ಹಾಕಿತು. ಅಂತಿಮವಾಗಿ ಅಭಿಮನ್ಯು, ಸುಗ್ರೀವ ಮತ್ತು ಗೋಪಿ ಆನೆಗಳ ಸಹಕಾರದೊಂದಿಗೆ ಲಾರಿ ಏರಿಸಲಾ ಯಿತು. ಮರಿಗೆ ಜನ್ಮ ನೀಡಿದ ಲಕ್ಷ್ಮಿ ಆನೆಯನ್ನು ಬೆಳಗ್ಗಿನ ಜಾವ ಕಳುಹಿಸಿಕೊಡಲಾಯಿತು. ಈ ಬಾರಿ ಮಾವುತರು, ಕಾವಾಡಿಗರ ಸಹಕಾರದೊಂದಿಗೆ ಜಂಬೂಸವಾರಿ ಯಶಸ್ವಿಯಾಗಿ ನಡೆದಿದೆ.

ಕರಿಕಾಳನ್, ಡಿಸಿಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net