

ಮಸ್ಕಿ: ಪಟ್ಟಣದಲ್ಲಿ ಮೇ 2 ರಂದು ವೀರಶೈವ ಲಿಂಗಾಯತ ಸಮಾಜದಿಂದ ಜಗದ್ಗುರು ರೇಣುಕಾಚಾರ್ಯ ಮತ್ತು ಬಸವ ಜಯಂತಿ ಆಚರಣೆ ಹಾಗೂ ಮಸ್ಕಿ ಗುರು ಮಂದಾರ ಧ್ವನಿಸುರುಳಿ ಬಿಡುಗಡೆ ಹಾಗೂ ಧಾರ್ಮಿಕ ಸಭೆ ಆಯೋಜಿಸಲಾಗಿದೆ ಎಂದು ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಭಾನುವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಮೇ 2 ರಂದು ಸಂಜೆ 6 ಗಂಟೆಗೆ ಜನಜಾಗೃತಿ ಧರ್ಮಸಭೆ ನಡೆಯಲಿದೆ. ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯವಹಿಸುವರು. ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ಬಳಗಾನೂರು ಮರಿಸ್ವಾಮಿ ಮಠದ ಸಿದ್ಧಬಸವ ಸ್ವಾಮೀಜಿ, ಅಂಕುಶದೊಡ್ಡಿಯ ವಾಮದೇವ ಶಿವಾಚಾರ್ಯರು, ವೆಂಕಟಗಿರಿ ಕ್ಯಾಂಪಿನ ಸಿದ್ಧರಾಮ ಶರಣರು, ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ, ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಇತರರು ಭಾಗವಹಿಸಲಿದ್ದಾರೆ.
ಅಂದು ಮುಂಜಾನೆ 5:30ಕ್ಕೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಧ್ವಜಾರೋಹಣ ನೆರವೇರಲಿದೆ. 6:30 ಗಂಟೆಗೆ ಜಂಗಮ ವಟುಗಳ ಅಯ್ಯಚಾರ ಮತ್ತು ಶಿವಭಕ್ತರಿಗೆ ಲಿಂಗದೀಕ್ಷೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು. ಪ್ರಮುಖರಾದ ಡಾ.ಪಂಚಾಕ್ಷರಯ್ಯಸ್ವಾಮಿ, ಡಾ.ಮಲ್ಲಿಕಾರ್ಜುನ ಇತ್ಲಿ, ಅಪ್ಪಾಜಿಗೌಡ ಪಾಟೀಲ, ಕೊಮಾರಪ್ಪ ಕಮತರ, ಡಾ.ಪಂಪಣ್ಣ ಇದ್ದರು.